ಕರಾವಳಿ ಗಡಿಗಳ ಗ್ರಾಮಗಳಲ್ಲಿ ವೈಬ್ರಂಟ್ ವಿಲೇಜ್ ಪ್ರೋಗ್ರಾಮ್ ಜಾರಿಗೆ ಕೇಂದ್ರ ಚಿಂತನೆ: ಕರಾವಳಿ ಕಾವಲು ಪೊಲೀಸ್ ಎಸ್ಪಿ ಅಬ್ದುಲ್ ಅಹದ್
ಉಡುಪಿ, ಆ.22: ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಗಡಿಗಳಲ್ಲಿರುವ ಹಳ್ಳಿಗಳ ಜನರು ವಲಸೆ ಹೋಗದಂತೆ ತಡೆಯುವ ಮತ್ತು ಗ್ರಾಮಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಕೇಂದ್ರ ಸರಕಾರದ ವೈಬ್ರಂಟ್ ವಿಲೇಜ್ ಪ್ರೋಗ್ರಾಮ್‌ನ್ನು ಕರ್ನಾಟಕ ಕರಾವಳಿ ಗಡಿಯಲ್ಲಿಯೂ ಅನುಷ್ಠಾನಕ್ಕೆ ತರಲು ಚಿಂತನೆ ನಡೆಯುತ್ತಿದೆ. ಈ ಸಂಬಂಧ ಕರಾವಳಿ ಕಾವಲು ಪೊಲೀಸ್ ವತಿಯಿಂದ ಇಲ್ಲಿನ ಗ್ರಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ತಿಳಿಸಿದ್ದಾರೆ.
ಉಡುಪಿ ಪತ್ರಿಕಾ ಭವನ ಸಮಿತಿಯ ವತಿಯಿಂದ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಮಾದಕ ದ್ರವ್ಯ ಸಾಗಾಟ ಪ್ರಕರಣಗಳು ನಮ್ಮ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಈವರೆಗೆ ಕಂಡು ಬಂದಿಲ್ಲ. ಇದು ಹೆಚ್ಚು ದುಬಾರಿಯಾಗಿರುವುದರಿಂದ ದುಷ್ಕರ್ಮಿಗಳು ಸಮುದ್ರದಲ್ಲಿ ಇವುಗಳನ್ನು ಸಾಗಿಸುವುದಿಲ್ಲ. ಆದರೂ ನಾವು ಅಲರ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಮಾದಕ ದ್ರವ್ಯ ಎಂಬುದು ಸಾಮಾಜಿಕ ಪಿಡುಗು ಮಾತ್ರವಲ್ಲ, ಅದು ದೇಶದ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಆದುದರಿಂದ ಇದರ ವಿರುದ್ಧ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ಬೀಚ್‌ಗಳಲ್ಲಿ ಗಾಂಜಾ ಸೇವನೆ, ಮಾರಾಟಕ್ಕೆ ಸಂಬಂಧಿಸಿ ಹಲವು ಪ್ರಕರಣಗಳನ್ನು ದಾಖಲಿಸಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ ಎಂದು ಅವರು ಹೇಳಿದರು.
500 ಸಿಟಿಟಿವಿ ಅಳವಡಿಕೆ
ಭದ್ರತೆಯ ದೃಷ್ಠಿಯಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿಯಾನದ ಮೂಲಕ ಕಾರವಾರದಿಂದ ಮಂಗಳೂರುವರೆಗಿನ ಕರಾವಳಿ ತೀರದಲ್ಲಿ 500ಕ್ಕೂ ಅಧಿಕ ಕಡೆಗಳಲ್ಲಿ ಸಿಸಿಟಿವಿಯನ್ನು ಆಳವಡಿಸಲಾಗಿದೆ. ಖಾಸಗಿ ವ್ಯಕ್ತಿಗಳು ನಮ್ಮ ಮನವಿಗೆ ಸ್ಪಂದಿಸಿ ಸಮುದ್ರದ ದಿಕ್ಕಿನ ಕಡೆಗಳಿಗೂ ತಮ್ಮ ಮನೆ, ಕಟ್ಟಡಗಳಲ್ಲಿ ಸಿಟಿಟಿವಿ ಅಳವಡಿಸಿಕೊಂಡಿದ್ದಾರೆ ಎಂದು ಎಸ್ಪಿ ಅಬ್ದುಲ್ ಅಹದ್ ತಿಳಿಸಿದರು.
ಕಾರವಳಿ ಕಾವಲು ಪೊಲೀಸ್ ಸಮುದ್ರದಲ್ಲಿ 12 ನಾಟಿಕಲ್ ಮೈಲ್ (20 ಕಿ.ಮೀ.) ಹಾಗೂ ನೆಲದಲ್ಲಿ 500 ಮೀಟರ್ ಸಿಆರ್‌ಝೆಡ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ. ಭದ್ರತೆ ದೃಷ್ಠಿಯಿಂದ ರೆಸಾರ್ಟ್‌ಗಳಲ್ಲಿ ತಂಗಿರುವ ವಿದೇಶಿಯವರ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಾಗುತ್ತದೆ. ಅದೇ ರೀತಿ ಬಂದರುಗಳಲ್ಲಿಯೂ ತಪಾಸಣೆ ಮಾಡಲಾಗುತ್ತದೆ. ದೇಶದ ಭದ್ರತೆ ವಿಚಾರದಲ್ಲಿ ಎಲ್ಲರೂ ನಮಗೆ ಉತ್ತಮ ಸಹಕಾರ ನೀಡುತ್ತಾರೆ ಎಂದರು.
ಇಲಾಖೆಯಲ್ಲಿ ಡ್ರೋನ್ ಹಾಗೂ ಬೋಟುಗಳಿವೆ. ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒದಗಿಸುತ್ತಿವೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದ್ದಾಗ ದ್ವೀಪಗಳಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಲು ಡ್ರೋನ್‌ಗಳನ್ನು ಬಳಸಿಕೊಳ್ಳುತ್ತೇವೆ. ಇಲಾಖೆಗೆ ಇನ್ನು ಹೆಚ್ಚಿನ ಡ್ರೋನ್ ಬರುವ ಸಾಧ್ಯತೆ ಇದೆ. ಸಾಗರ ರಕ್ಷಕ ದಳದಲ್ಲಿ 1200ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸೀ ಅಂಬ್ಯುಲೆನ್ಸ್ ಅಗತ್ಯ
ಕರ್ನಾಟಕ ಕರಾವಳಿಗೆ ಸೀ ಅಂಬ್ಯುಲೆನ್ಸ್ ಸಾಕಷ್ಟು ಅವಶ್ಯಕವಾಗಿದ್ದು, ಇದನ್ನು ಒದಗಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಇಲಾಖೆಗೆ ಸಂಬಂಧಿಸಿ ಕೋಡಿಕನ್ಯಾನದಲ್ಲಿರುವ 25 ಎಕರೆ ಜಾಗದಲ್ಲಿ ಕೋಸ್ಟಲ್ ಸೆಕ್ಯುರಿಟಿ ತರಬೇತಿ ಕೇಂದ್ರ, ಆಸ್ಪತ್ರೆ, ವಿವಿಧ ಕಡೆ ಜೆಟ್ಟಿ, ಸೋಲಾರ್ ಪವರ್‌ಗಳನ್ನು ಸ್ಥಾಪಿಸಲು ಚಿಂತನೆಗಳು ನಡೆಯುತ್ತಿದೆ. ಈ ಕಾರ್ಯ ಹಂತಹಂತವಾಗಿ ನಡೆಯಲಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ಕೆಲವೊಂದು ರಕ್ಷಣಾ ಕಾರ್ಯಾಚರಣೆ ಸಂದರ್ಭ ಅಲೆಗಳ ಅಬ್ಬರ ಜೋರು ಇರುವಾಗ ನಮ್ಮ ಬೋಟು ಬಳಸಿ ಕೊಳ್ಳಲು ಸಾಧ್ಯವಾಗುವು ದಿಲ್ಲ. ಆಗ ಮೀನುಗಾರರ ಬೋಟುಗಳನ್ನೇ ಬಳಸಿ ಕೊಳ್ಳಬೇಕಾಗುತ್ತದೆ. ಕಳೆದ 13 ರಕ್ಷಣೆ ಕಾರ್ಯಾಚರಣೆಗಳನ್ನು ನಾವು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇಲಾಖೆಗೆ ಹೆಚ್ಚು ಸಾಮರ್ಥ್ಯದ ಬೋಟು ಗಳು ಬಂದಾಗ ಇಲ್ಲಿನ ಕೆಲವೊಂದು ಸಮಸ್ಯೆಗಳು ಪರಿಹಾರ ಕಾಣುತ್ತದೆ. ಇಲಾಖೆಗೆ ಬಲ ತುಂಬಿಸುವ ಕಾರ್ಯ ವನ್ನು ಸರಕಾರ ಹಂತಹಂತವಾಗಿ ಮಾಡುತ್ತಿದೆ ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು. ಉಡುಪಿ ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್ ಆರಾಡಿ ಸ್ವಾಗತಿಸಿ ದರು. ಸಹ ಸಂಚಾಲಕ ಅಂಕಿತ್ ಶೆಟ್ಟಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಮೀನುಗಾರರೇ ನಮ್ಮ ದೊಡ್ಡ ಶಕ್ತಿ!
ಸದಾ ಕಾಲ ಸಮುದ್ರದಲ್ಲಿರುವ ಮೀನುಗಾರರಿಂದ ಎಲ್ಲ ರೀತಿಯ ಸಹಕಾರ ನಮಗೆ ಸಿಗುತ್ತಿದೆ. ಇಲ್ಲಿನ ಮೀನುಗಾರರು ಯಾವತ್ತೂ ತುಂಬಾ ಅಲರ್ಟ್ ಆಗಿರುತ್ತಾರೆ. ಯಾವುದೇ ಹೊಸ ಅಥವಾ ಅನುಮಾನಾಸ್ಪದ ಬೋಟುಗಳು ಕಂಡುಬಂದರೆ ಕೂಡಲೇ ನಮಗೆ ಮಾಹಿತಿ ನೀಡುತ್ತಾರೆ. ಮೀನುಗಾರರೇ ನಮ್ಮ ಬಹಳ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಎಸ್ಪಿ ಅಬ್ದುಲ್ ಅಹದ್ ತಿಳಿಸಿದರು.
ಕರ್ನಾಟಕ ಕರಾವಳಿಯಲ್ಲಿ ಸುಮಾರು 25ಸಾವಿರ ಬೋಟುಗಳಿದ್ದು, ಇದರಲ್ಲಿ ಲಕ್ಷಾಂತರ ಮಂದಿ ದುಡಿಯುತ್ತಿರುತ್ತಾರೆ. ಅಲ್ಲದೆ ಅವರಲ್ಲಿ ವೈಯರ್‌ಲೆಸ್ ಕೂಡ ಇರುತ್ತದೆ. ಆದುದರಿಂದ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಅವರನ್ನು ಹಿಡಿದು ನಮಗೆ ಒಪ್ಪಿಸುತ್ತಾರೆ. ಹಾಗಾಗಿ ಮೀನುಗಾರರು ಮತ್ತು ನಮ್ಮ ಇಲಾಖೆ ಮಧ್ಯೆ ಉತ್ತಮ ಸಂಬಂಧ ಇದೆ ಎಂದರು.
‘ಕರ್ತವ್ಯದಲ್ಲಿ ಟೀಮ್ ವರ್ಕ್ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಸಮಾನತೆಯ ತತ್ವದ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ನಮ್ಮ ಇಲಾಖೆಯಲ್ಲಿ ಕಳೆದ ಒಂದು ವರ್ಷದಿಂದ ಅತ್ಯುತ್ತಮ ಟೀಮ್ ವರ್ಕ್ ನಡೆಯುತ್ತದೆ. ಹಾಗಾಗಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದಿವೆ. ಅಲ್ಲದೆ ನಿಷ್ಠೆ ಕೂಡ ಅತೀ ಅಗತ್ಯ’ -ಅಬ್ದುಲ್ ಅಹದ್, ಎಸ್ಪಿ, ಕರಾವಳಿ ಕಾವಲು ಪೊಲೀಸ್, ಮಲ್ಪೆ |