ಚಂದ್ರಯಾನ-3 ಯಶಸ್ಸು: ಉಡುಪಿ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ
ಉಡುಪಿ, ಆ.23:ವಿಕ್ರಮ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆ ತಂದಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಚಂದ್ರಯಾನ-3ರ ಅದ್ಭುತ ಯಶಸ್ಸಿನ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್‌ನ್ನು ನೇರ ಪ್ರಸಾರದಲ್ಲಿ ವೀಕ್ಷಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾ ಯಿತು. ಬಳಿಕ ಉಡುಪಿ ನಗರದ ಕ್ಲಾಕ್ ಟವರ್ ಎದುರು ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಲಾಯಿತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತ ಚಂದ್ರನ ದಕ್ಷಿಣ ದ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಮಸ್ತ ಭಾರತೀಯರಿಗೆ ಹೆಮ್ಮೆ. ಈ ಐತಿಹಾಸಿಕ ಸಾಧನೆಗೈದಿರುವ ಇಸ್ರೋ ವಿಜ್ಞಾನಿಗಳ ಇಡೀ ತಂಡಕ್ಕೆ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಭಾರತ ಇಂತಹ ವಿಶ್ವ ದಾಖಲೆಯ ಸಾಧನೆಯ ಹೊಸ ಮೈಲಿಗಲ್ಲು ತಲುಪಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ನಾಯಕರಾದ ಕೆ.ಉದಯ ಕುಮಾರ ಶೆಟ್ಟಿ, ನಯನಾ ಗಣೇಶ್, ರವಿ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಶ್ಯಾಮಲಾ ಎಸ್. ಕುಂದರ್, ವೀಣಾ ಎಸ್. ಶೆಟ್ಟಿ, ಸತ್ಯಾನಂದ ನಾಯಕ್, ಗುರುಪ್ರಸಾದ್ ಶೆಟ್ಟಿ, ಶಿವಕುಮಾರ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಶ್ರೀನಿಧಿ ಹೆಗ್ಡೆ, ದಾವೂದ್ ಅಬೂಬಕರ್ ಮುಂತಾದವರು ಉಪಸ್ಥಿತರಿದ್ದರು.