ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ: ಶಿರ್ವ ಎಸ್ಸೈ ಸಕ್ತಿವೇಲು

Update: 2023-07-18 14:22 GMT

ಶಿರ್ವ, ಜು.18: ಹದಿಹರೆಯದ ಮಕ್ಕಳು ವಿವಿಧ ಆಕರ್ಷಣೆಗಳಿಗೆ ಒಳಗಾಗಿ ಡ್ರಗ್ಸ್ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆ, ಅಪ್ರಾಪ್ತರ ಕೈಗೆ ವಾಹನ ನೀಡುವುದರಿಂದ ಆಗುವ ದುರಂತಗಳಿಗೆ ಪೋಷಕರೇ ಕಾರಣರಾಗುತ್ತಿದ್ದು, ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಶಿರ್ವ ಪೋಲಿಸ್ ಠಾಣಾಧಿಕಾರಿ ಸಕ್ತಿವೇಲು ಹೇಳಿದ್ದಾರೆ.

ಬಂಟಕಲ್ಲು ನಾಗರಿಕ ಸೇವಾ ಸಮಿತಿ ವತಿಯಿಂದ ಸೋಮವಾರ ಸಂಜೆ ಶ್ರೀ ಕ್ಷೇತ್ರ ಬಂಟಕಲ್ಲು ದೇವಳದ ವಠಾರದಲ್ಲಿ ಆಯೋಜಿಸಲಾದ ರಸ್ತೆ ಸುರಕ್ಷತೆ -ಪೋಲಿಸ್ ಇಲಾಖಾ ಮಾಹಿತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಬೀಗ ಮುರಿಯುವುದು, ಮನೆ ಕಳ್ಳತನದ ಪ್ರಮಾಣ ಕಡಿಮೆಯಾಗಿದ್ದು, ರಸ್ತೆ ಅಪಘಾತ, ಸೈಬರ್ ಕ್ರೈಮ್ ಜಾಸ್ತಿಯಾಗಿದೆ. ಸರಕಾರದ ಯೋಜನೆಗಳು ಡಿಜಿಟಲೀಕರಣಗೊಳ್ಳುತ್ತಿದ್ದು ಸೈಬರ್ ಕಳ್ಳರ ಜಾಲ ಜಾಸ್ತಿಯಾಗಿದೆ. ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುವ ಜಾಲದ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ. ಧರ್ಮದ ಬಗ್ಗೆ ಅವಹೇಳನ, ರಾಜಕೀಯ ಪ್ರೇರಿತ ಸುಳ್ಳುಸುದ್ದಿಗಳನ್ನು ಲೈಕ್ ಅಥವಾ ಶೇರ್ ಮಾಡುವುದೂ ಅಪರಾಧ ವಾಗಿದ್ದು ಕೇಸ್ ದಾಖಲಾಗುತತಿದೆ ಎಂದು ಅವರು ಎಚ್ಚರಿಸಿದರು.

ಅಪ್ರಾಪ್ತರಿಗೆ ವಾಹನ ನೀಡಿ ಸಿಕ್ಕಿ ಬಿದ್ದರೆ ಪೋಷಕರಿಗೆ 25 ಸಾವಿರ ರೂ ದಂಡ, ಅಪಘಾತವಾದಲ್ಲಿ ಯಾವುದೇ ಪರಿಹಾರ ಸಿಗಲ್ಲ. ಪೋಲಿಸ್ ಸಿಬ್ಬಂದಿ ಗಳಿಗೂ ಸಕಾಲಿಕ ತರಬೇತಿ ನೀಡಲಾಗುತ್ತಿದ್ದು, ಬದಲಾವಣೆಗೆ ತಕ್ಕಂತೆ ಹೊಂದಿಸಿ ಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಪರಾಧಗಳ ಪ್ರಮಾಣ ಕಡಿಮೆ ಮಾಡಲು ಪೋಲಿಸ್ ಇಲಾಖೆ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ನಾಗರಿಕ ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿದ್ದರು. ಬಂಟಕಲ್ಲು ಶ್ರೀದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಶಿರ್ವ ಮಹಿಳಾ ಮಂಡಲ ಅಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ಲು, ಗ್ರಾಪಂ ಸದಸ್ಯರಾದ ವಾಲೆಟ್ ಕಸ್ತಲಿನೊ, ಸತೀಶ್ ಪಿ., ಪೋಲಿಸ್ ಎಎಸೈ ಕೃಷ್ಣ ಆಚಾರ್ಯ, ಸಿಬ್ಬಂದಿ ಧರ್ಮ, ಶಿವರಾಮ್ ಉಪಸ್ಥಿತರಿದ್ದರು. ನಾಗರಿಕ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News