ಉಡುಪಿ ಜಿಲ್ಲೆಯಲ್ಲಿ ಕಾಲರಾ ಭೀತಿ; ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ: ಡಿಸಿ ಡಾ.ವಿದ್ಯಾಕುಮಾರಿ ಕರೆ

Update: 2024-09-18 15:05 GMT

ಉಡುಪಿ, ಸೆ.18: ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ದಿಂದ ಇದ್ದು ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಮಾತ್ರ ಕಾಲರಾ ರೋಗದಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿ ಸಭೆ ಹಾಗೂ ಡೆಂಗ್ಯೂ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಕಳೆದ ವಾರದಲ್ಲಿ 11 ಕಾಲರಾ ಪ್ರಕರಣಗಳು ವರದಿಯಾಗಿದ್ದು, ಮೊದಲ ಪ್ರಕರಣ ವರದಿಯಾದ ಕಾರ್ಕಳದ ಈದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಉಳಿದಂತೆ ಮಲ್ಪೆ, ಶಿರ್ವ, ಕಾಪು, ಕೆಮ್ಮಣ್ಣು ಪ್ರದೇಶಗಳಲ್ಲಿ ವಾಂತಿಬೇಧಿ ಕಂಡುಬಂದ್ದಿದ್ದು, ಅವುಗಳೂ ಸಹ ಕಾಲರಾ ರೋಗ ಎಂದು ವರದಿ ಬಂದಿವೆ. ಹೀಗಾಗಿ ಸಾರ್ವಜನಿಕರು ಕಾಲರಾ ರೋಗದ ಬಗ್ಗೆ ಹೆಚ್ಚು ಮುಂಜಾಗೃತೆ ವಹಿಸಬೇಕು ಎಂದವರು ಮನವಿ ಮಾಡಿದರು.

ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಲ್ಲಾ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಊಟ ತಯಾರಿ ಹಾಗೂ ಊಟ ಮಾಡುವ ಮುನ್ನ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಶೌಚಾಲಯಗಳನ್ನು ಬಳಸಿದ ನಂತರವು ಸಹ ಕೈಗಳನ್ನು ಸಾಬೂನಿನಿಂದ ತೊಳೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು ಹಾಗೂ ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಆಹಾರ ಗಳನ್ನು ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಡೆಂಗ್ಯೂ, ಚಿಕನ್‌ಗುನ್ಯ, ಝೀಕಾ ರೋಗಗಳು ವೈರಸ್ ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ. ನಗರ ಹಾಗೂ ಗ್ರಾಮೀಣ ಪ್ರದೇಶ ಜನರು ಮಳೆಯ ನೀರು ಅಥವಾ ಇತರೆ ನೀರುಗಳು ಎಲ್ಲೆಂದರಲ್ಲೆ ನಿಂತು ಸೊಳ್ಳೆಗಳ ಉತ್ಪನ್ನ ತಾಣಗಳಾಗದಂತೆ ಎಚ್ಚರವಹಿಸಬೇಕು ಎಂದರು.

ಮಳೆಗಾಲ ಮುಗಿಯುತ್ತಾ ಬಂದಿರುವ ಹಿನ್ನ್ನೆಲೆಯಲ್ಲಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಬಾವಿ ಹಾಗೂ ಇತರ ಮೂಲದ ನೀರು ಪರೀಕ್ಷೆಯನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಕೈಗೊಂಡು ಅವುಗಳು ಬಳಕೆಗೆ ಯೋಗ್ಯವಾಗಿವೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೆ. 14ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ಅಂದೋಲನದ ರೀತಿಯಲ್ಲಿ ನಡೆಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯವನ್ನು ಕಾಪಾಡಲು ಹೆಚ್ಚಿನ ಆದ್ಯತೆ ವಹಿಸಬೇಕು ಎಂದವರು ಸೂಚನೆ ನೀಡಿದರು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಗರ್ಭಿಣಿ ಮಹಿಳೆಯರ ಆರೋಗ್ಯ ಸುಧಾರಣೆ ಕುರಿತು ಮಾಹಿತಿ ಗಳನ್ನು ಕ್ರೋಢಿಕರಿಸುವ ಜನನಿ ಆ್ಯಪ್‌ನ್ನು ಸೃಜನಿಸಿದ್ದು ಇದರ ಪ್ರಾತ್ಯಕ್ಷಿಕೆಯನ್ನು ಸಭೆಯಲ್ಲಿ ಪ್ರದರ್ಶಿಸಿ ಸಾಧಕ ಭಾದಕ ಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ, ಎಂಐಟಿ ಉಪನಿರ್ದೇಶಕ ಡಾ.ಸೋಮಶೇಖರ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ.ನಾಗರತ್ನ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಪೌರಾಯುಕ್ತ ರಾಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಕಾಲರಾ ಸೋಂಕುಕಾರಕ ರೋಗ

ಕಾಲರಾ ಸೋಂಕುಕಾರಕ ರೋಗ. ತೀವ್ರತರವಾದ ನೀರಿನಿಂದ ಕೂಡಿದ ಅತೀಸಾರಕ್ಕೆ ನಿರ್ಜಲೀಕರಣಕ್ಕೆ ಕಾರಣವಾಗ ಬಹುದು. ಬ್ರಿಯೊ ಕಾಲರಾ ಎಂಬ ಬ್ಯಾಕ್ಟಿರಿಯದಿಂದ ಕಲುಷಿತವಾದ ಆಹಾರವನ್ನು ಸೇವಿಸುವುದರಿಂದ ಹರಡುತ್ತದೆ. ಸ್ವಚ್ಛತೆಗೆ ಆದ್ಯತೆ ಕಡಿಮೆ ಇರುವ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೋಂಕು ಇರುವ ಆಹಾರ ಅಥವಾ ನೀರಿನ ಸೇವನೆಯಿಂದ ಬ್ಯಾಕ್ಟಿರೀಯಾ ದೇಹವನ್ನು ಪ್ರವೇಶಿಸುತ್ತದೆ.

ಮನೆಗೆ ತರುವ ಎಲ್ಲಾ ರೀತಿಯ ತರಕಾರಿ, ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ಸ್ವಚ್ಛ ಗೊಳಿಸಿ ಬಳಸಬೇಕು. ತೀವ್ರವಾದ ಅತಿಸಾರ ವಾಂತಿ ಹಾಗೂ ನಿರ್ಜಲೀಕರಣದಂತಹ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.

ಹೊಟೇಲ್, ರೆಸ್ಟೊರೆಂಟ್‌ಗಳಲ್ಲಿ ಜನರಿಗೆ ಕುಡಿಯಲು ಬಿಸಿನೀರನ್ನೇ ನೀಡಬೇಕು. ಹೋಟೆಲ್‌ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆ ಗಳನ್ನು ಸಹ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ಆಹಾರ ಪದಾರ್ಥಗಳನ್ನು ಮುಟ್ಟುವುದು ಸೂಕ್ತ ಎಂದರು.



 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News