ಹೆಬ್ರಿ| ಮುದ್ರಾಡಿ ಬಳಿ ಮೇಘಸ್ಪೋಟ: ಜಲಪ್ರವಾಹದಿಂದ ಮನೆಗಳಿಗೆ ಹಾನಿ

Update: 2024-10-06 15:27 GMT

ಹೆಬ್ರಿ: ಮುದ್ರಾಡಿ ಸಮೀಪದ ಬಲ್ಲಾಡಿ ಎಂಬಲ್ಲಿ ಮಧ್ಯಾಹ್ನ ಹಠಾತ್ ಸುರಿದ ಭಾರೀ ಮಳೆಗೆ ಜಲ ಪ್ರವಾಹ ಉಂಟಾಗಿದ್ದು, ಇದರ ಪರಿಣಾಮ ಹಲವು ಮನೆಗಳು ಹಾಗೂ ತೋಟಗಳಿಗೆ ನೀರು ನುಗ್ಗಿವೆ. ಅಲ್ಲದೆ ಕಾರು, ಬೈಕುಗಳು ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾಗಿದೆ.

ಮಧ್ಯಾಹ್ನ 2.30ರಿಂದ 3.45ರವರೆಗೆ ಬಲ್ಲಾಡಿಯ ಈಶ್ವರನಗರ ಸಮೀಪ ಭಾರೀ ಮಳೆ ಸುರಿದಿದ್ದು, ಇದರ ಪರಿಣಾಮ ನೆರೆ ಸೃಷ್ಠಿಯಾಗಿ ಮಳೆಯ ನೀರು ಮುದ್ರಾಡಿಯ ಹೊಸ ಕಂಬ್ಲ, ಕಾಂತರಬೈಲು, ಕೆಲಕಿಲ ಎಂಬಲ್ಲಿನ ಸುಮಾರು ಎಂಟು ಮನೆಗಳಿಗೆ ನುಗ್ಗಿವೆ. ಅಲ್ಲದೆ ಇಡೀ ಪ್ರದೇಶಗಳು ಜಲಾವೃತಗೊಂಡಿವೆ.

ಹಠಾತ್ ಪ್ರವಾಹಕ್ಕೆ 2 ಕಾರುಗಳು ಮತ್ತು ಬೈಕ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಮನೆಯೊಳಗೆ ಸಿಲುಕಿಕೊಂಡ ಮನೆ ಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಹೊರ ಕರೆತರಲಾಯಿತು. ಇದರಿಂದ ಯಾವುದೇ ಪ್ರಾಣಾ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ನೆರೆಯಿಂದಾಗಿ ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಮಳೆಗೆ ಒಂದು ಮನೆಯ ದನದ ಕೊಟ್ಟಿಗೆಗೆ ಕುಸಿದಿದ್ದು, ಇಲ್ಲಿನ ಒಂದು ದನ ನಾಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಲ್ಲದೆ ಈ ಪರಿಸರದಲ್ಲಿ ಭಾರೀ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದ ಪರಿಣಾಮ ಮುದ್ರಾಡಿ, ಪಡುಕುಡುರು, ಎಳಗೋಳಿ ಎಂಬಲ್ಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

‘ಕಬ್ಬಿನಾಲೆಯ ಬೆಟ್ಟದಲ್ಲಿ ಉಂಟಾದ ಮೇಘಸ್ಫೋಟದಿಂದ ಕೇವಲ ಕೆಲವೇ ಗಂಟೆಯಲ್ಲಿ ಭಾರೀ ಮಳೆಯಾಗಿ ಜಲ ಪ್ರವಾಹ ಸೃಷ್ಠಿಯಾಗಿದೆ. ಇದರ ಪರಿಣಾಮ ನೀರು ಮನೆಗಳಿಗೆ ನುಗ್ಗಿವೆ ಎಂದು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಮುದ್ರಾಡಿ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

‘ಅ.9ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಹೆಬ್ರಿ ತಾಲೂಕಿನ ಬಲ್ಲಾಡಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ನೆರೆ ಸೃಷ್ಠಿಯಾಗಿ ಮನೆಗಳು ಹಾಗೂ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿ ಗಳು ಸ್ಥಳದಲ್ಲಿದ್ದು, ನೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ’

-ಡಾ.ಕೆ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ ಉಡುಪಿ

‘ಗುಡ್ಡ ಪ್ರದೇಶವಾಗಿರುವುದರಿಂದ ಒಂದೇ ಜಾಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಸದ್ಯ ಯಾವುದೇ ಸಮಸ್ಯೆ ಆಗಿಲ್ಲ. ಕಾರು, ಬೈಕುಗಳಿಗೆ, ಏಳೆಂಟು ಮನೆಗಳಿಗೆ ನೀರು ನುಗ್ಗಿವೆ. ಒಂದು ದನದ ಕೊಟ್ಟಿಗೆ ಹಾನಿಯಾಗಿದೆ. ಒಂದು ಜಾನುವಾರು ನಾಪತ್ತೆಯಾಗಿದೆ’

-ಎಸ್.ಎ.ಪ್ರಸಾದ್, ತಹಶೀಲ್ದಾರು, ಹೆಬ್ರಿ








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News