ಮಣಿಪಾಲ ಪೊಲೀಸರಿಂದ ವಾರಾಂತ್ಯದ ವಿಶೇಷ ಕಾರ್ಯಾಚರಣೆ: 5 ಕಿ.ಮೀ. ಪಥಸಂಚಲನ

Update: 2024-10-06 17:02 GMT

ಮಣಿಪಾಲ, ಅ.6: ಮಣಿಪಾಲದಲ್ಲಿ ನಿರಂತರವಾಗಿ ನಡೆಯುತ್ತಿರುವ ಡ್ರಗ್ಸ್ ದಂಧೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ವಾರಾಂತ್ಯ ಶನಿವಾರ ರಾತ್ರಿ ವೇಳೆ ಮಣಿಪಾಲದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸುವ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಿದರು.

ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣೆಯಿಂದ ಆರಂಭಗೊಂಡ ಪಥ ಸಂಚಲನವು ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್ ಮಾರ್ಗವಾಗಿ ಮಾಹೆ ಕ್ಯಾಂಪನ್ ಮೂಲಕ ಎಂಐಟಿ ಜಂಕ್ಷನ್‌ನಿಂದ ಕೆಳಗೆ ಸಾಗಿ ಬಳಿಕ ವಾಪಾಸ್ಸು ಮುಖ್ಯ ರಸ್ತೆಯಲ್ಲಿ ಆಗಮಿಸಿ ಠಾಣೆಯಲ್ಲಿ ಸಮಾಪ್ತಿಗೊಂಡಿತು.

ಸುಮಾರು ಐದು ಕಿ.ಮೀ. ಉದ್ದದ ಈ ಪಥ ಸಂಚಲನದಲ್ಲಿ ಎರಡು ವಿಶೇಷ ಬೈಕ್‌ಗಳು ಹಾಗೂ ಜೀಪುಗಳ ಮೂಲಕ ಸೈರಲ್ ಮೊಳಗಿಸಿ ಕಾನೂನು ಉಲ್ಲಂಘಿಸುವವರಿಗೆ ಖಡಕ್ ಎಚ್ಚರಿಕೆ ನೀಡಲಾಯಿತು. ವಾರಾಂತ್ಯದ ಈ ವಿಶೇಷ ಕಾರ್ಯಾಚರಣೆ ಯಲ್ಲಿ ಸಾರ್ವಜನಿಕರಿಗೆ ಕಾನೂನು ಉಲ್ಲಂಘನೆ ಕುರಿತು ಅರಿವು ಮೂಡಿಸಲಾಯಿತು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸುವ ಸಂದೇಶವನ್ನು ನೀಡಲಾಯಿತು. ಠಾಣಾ ಎಸ್ಸೈ ಅಕ್ಷಯ ಕುಮಾರಿ ಹಾಗೂ 25 ಪೊಲೀಸ್ ಸಿಬ್ಬಂದಿ ಈ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

12 ಪ್ರಕರಣಗಳು ದಾಖಲು: ಮಣಿಪಾಲದಲ್ಲಿ ವಾರಾಂತ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕರ ಸ್ಥಳದಲ್ಲಿ ಮದ್ಯ ಸೇವನೆ, ರಸ್ತೆ ಸಂಚಾರ ಉಲ್ಲಂಘನೆ, ಮದ್ಯ ಸೇವಿಸಿ ವಾಹನ ಚಾಲನೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ವಾರಾಂತ್ಯದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳ ಸೇವನೆ, ರಸ್ತೆಯಲ್ಲಿ ಕುಡಿದು ಗಲಾಟೆ, ಸಾರ್ವಜನಿಕರಿಗೆ ತೊಂದರೆ ಮಾಡುವುದನ್ನು ತಡೆಯಲು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಮಣಿಪಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಧ್ಯರಾತ್ರಿ 12 ಗಂಟೆಯೊಳಗೆ ಎಲ್ಲ ಅಂಗಡಿಮುಗ್ಗಟ್ಟು, ಬಾರ್ ರೆಸ್ಟೊರೆಂಟ್‌ಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈ ಕಾರ್ಯಾಚರಣೆಯ ಮೂಲಕವೂ ಆ ಎಚ್ಚರಿಕೆಯನ್ನು ನೀಡಲಾಯಿತು. ಬಹುತೇಕ ಅಂಗಡಿಮುಗ್ಗಟ್ಟುಗಳನ್ನು ಮಾಲಕರು ರಾತ್ರಿ 11 ಗಂಟೆಯೊಳಗೆ ಬಂದ್ ಮಾಡಿ ಪೊಲೀಸ ರೊಂದಿಗೆ ಸಹಕರಿಸಿದರು.

ಎರಡು ಕಡೆ ನಾಕಾಬಂದಿ: ವಾರಾಂತ್ಯದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಹಾಗೂ ಎಂಐಟಿ ಜಂಕ್ಷನ್‌ ಗಳಲ್ಲಿ ನಾಕಾಬಂದಿ ವಿಧಿಸಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಈ ರೀತಿಯ ವಿಶೇಷ ಕಾರ್ಯಾಚರಣೆಯನ್ನು ನಾಲ್ಕೈದು ತಿಂಗಳ ಹಿಂದೆ ಮಣಿಪಾಲದಲ್ಲಿ ಮಾಡಿದ್ದು, ಮುಂದೆ 15 ದಿನಗಳಿ ಗೊಮ್ಮೆ ಈ ವಿಶೇಷ ಕಾರ್ಯಾಚರಣೆ ಮಾಡಲಾಗುವುದು. ಆದರೆ ನಾಕಾಬಂದಿ ಕಾರ್ಯಾಚರಣೆ ಪ್ರತಿ ಶನಿವಾರ ಕೂಡ ಮುಂದುವರೆಯುತ್ತದೆ. ಇಲ್ಲಿ ವಾಹನಗಳನ್ನು ತಪಾಸಣೆ ನಡೆಸಿ ಮದ್ಯ ಸೇವನೆ, ಡ್ರಗ್ಸ್ ಸೇವನೆ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ತಿಳಿಸಿದ್ದಾರೆ.

ಶಿಂಬ್ರಾ ಸೇತುವೆಯಲ್ಲಿ ನಾಕಾಬಂದಿ

ಮಣಿಪಾಲ ಸಮೀಪದ ಶಿಂಬ್ರಾ ಸೇತುವೆಯಲ್ಲಿ ಯುವಕರು ಮದ್ಯ, ಗಾಂಜಾ ಸೇವನೆ ಮಾಡಿ ದಾಂಧಲೆ ನಡೆಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸರು ಅಲ್ಲಿ ನಾಕಾಬಂದಿ ವಿಧಿಸಿ ತಪಾಸಣೆ ನಡೆಸುತ್ತಿದ್ದಾರೆ.

ಸೇತುವೆಯಲ್ಲಿ ರಾತ್ರಿ ವೇಳೆ ಕಾರು, ಬೈಕುಗಳಲ್ಲಿ ಬಂದು ಮದ್ಯ, ಡ್ರಗ್ಸ್ ಸೇವನೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಈ ಪ್ರದೇಶದಲ್ಲಿ ಪ್ರತಿನಿತ್ಯ ನಾಕಾಬಂದಿ ವಿಧಿಸಿ ತಪಾಸಣೆ ನಡೆಸಲಾಗುತ್ತಿದೆ. ಈ ನಾಕಾಬಂದಿಯಲ್ಲಿ ಒಬ್ಬರು ಎಸ್ಸೈ ಹಾಗೂ ಇಬ್ಬರು ಸಿಬ್ಬಂದಿ ಕಾರ್ಯಾಚರಿಸುತ್ತಾರೆ. ಈಗಾಗಲೇ ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಣಿಪಾಲದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು, ಮದ್ಯ, ಡ್ರಗ್ಸ್ ಸೇವನೆಯನ್ನು ನಿಯಂತ್ರಿಸಲು ಹಾಗೂ ಜಾಗೃತಿ ಮೂಡಿಸಲು ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಈ ಮೂಲಕ ಕಾನೂನು ಕ್ರಮ ಗಳನ್ನು ತೆಗೆದುಕೊಳ್ಳಲಾಗಿದೆ. ಕಾನೂನು ಕಾಪಾಡುವ ನಿಟ್ಟಿನಲ್ಲಿ ರಾತ್ರಿ ನಿಗದಿತ ಸಮಯದೊಳಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ’

-ಡಾ.ಕೆ.ಅರುಣ್, ಎಸ್ಪಿ ಉಡುಪಿ



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News