ಕಟಪಾಡಿಯಲ್ಲಿ ಕಟ್ಟಡ ಕಾರ್ಮಿಕನ ಕೊಲೆ ಪ್ರಕರಣ: ಆರೋಪಿ ಬಂಧನ
ಕಾಪು, ಜು.18: ಕಟಪಾಡಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಒರಿಸ್ಸಾ ಮೂಲದ ಗಣೇಶ್ ಸೇತಿ(50) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೆಲವೇ ಗಂಟೆಗಳ ಒಳಗೆ ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಒರಿಸ್ಸಾ ಮೂಲದ ಆಕನ್ ಎಂದು ಗುರುತಿಸಲಾಗಿದೆ. ಈತನನ್ನು ಉಡುಪಿ ಎಸ್ಪಿ ಅಕ್ಷಯ್ ಹಾಕೆ ಮಚೀಂದ್ರ ಮತ್ತು ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಎಸ್ಸೈ ಶೈಲಾ, ಕಾಪು ಠಾಣಾ ಸಿಬ್ಬಂದಿ ಸುಧಾಕರ್ ಮತ್ತು ನಾರಾಯಣ ಹಾಗೂ ಇತರ ಸಿಬ್ಬಂದಿ ತಂಡ ಉಡುಪಿ ಎಕ್ಸ್‌ಪ್ರೆಸ್ ಬಸ್ ನಿಲ್ದಾಣದ ಬಳಿ ಜು.17ರಂದು ರಾತ್ರಿ 10:30ರ ಸುಮಾರಿಗೆ ಬಂಧಿಸಿದೆ.
ಜು.17ರಂದು ಸಂಜೆ ವೇಳೆ ಕಟಪಾಡಿ ಹಳೆ ಸಂತೆ ಮಾರ್ಕೆಟ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಆಕನ್ ಹಾಗೂ ಗಣೇಶ್ ಎಂಬವರ ಮಧ್ಯೆ ಕ್ಷುಲಕ ಕಾರಣಕ್ಕೆ ಹೊಡೆದಾಟ ನಡೆದಿತ್ತು. ಈ ವೇಳೆ ಆಕನ್, ಗಣೇಶ ಸೇತಿಗೆ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡ ಗಣೇಶ್, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಸಹಿತ ಅಧಿಕಾರಿಗಳು ಭೇಟಿ ನೀಡಿ, ಆರೋಪಿ ಪತ್ತೆಗೆ ಕಾಪು ವೃತ್ತ ನಿರೀಕ್ಷಕರ ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಕೆಲವೇ ಗಂಟೆಗಳ ಒಳಗೆ ಬಂಧಿಸುವಲ್ಲಿ ಯಶಸ್ವಿಯಾದರು. ಹೊಡೆದಾಟದ ವೇಳೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.