ಸಂಜೀವಿನಿ ಸದಸ್ಯರಿಂದ 1034 ಎಕರೆ ಹಡಿಲುಭೂಮಿಯಲ್ಲಿ ಕೃಷಿ

Update: 2023-07-23 12:42 GMT

ಉಡುಪಿ, ಜು.23: ಜಿಲ್ಲೆಯಾದ್ಯಂತ ಹಲವು ವರ್ಷಗಳಿಂದ ಹಡಿಲು ಬಿದ್ದ ಭೂಮಿಯಲ್ಲಿ ಮತ್ತೆ ಕೃಷಿ ಚಟುವಟಿಕೆ ನಡೆಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಒಕ್ಕೂಟಗಳು ಕಾರ್ಯೋನ್ಮುಖ ವಾಗಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಗುರುತಿಸಿರುವ 1034 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಚಿಕ್ಕ ಹಿಡುವಳಿ, ಕೂಲಿಕಾರರ ಸಮಸ್ಯೆ ಹಾಗೂ ಲಾಭದಾಯಕ ವಲ್ಲದ ಕಾರಣದಿಂದಾಗಿ ಜನರು ಕೃಷಿಯಿಂದ ವಿಮುಖರಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳನ್ನು ಹಡಿಲು ಬಿಟ್ಟಿರುವುದನ್ನು ಗಮನದಲ್ಲಿರಿಸಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಈ ಕಾರ್ಯಕ್ಕೆ ಒತ್ತು ನೀಡಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಹಾಗೂ ಕೃಷಿ ಇಲಾಖೆಗಳ ಮೂಲಕ ಹಡಿಲು ಭೂಮಿಯಲ್ಲಿ ಕೃಷಿ ಮಾಡಲು ಗ್ರಾಮ ಪಂಚಾಯತ್‌ವಾರು ಗುರಿಯನ್ನು ನಿಗದಿಗೊಳಿಸಿದ್ದಾರೆ.

ಸಿಇಓ ಈ ಜವಾಬ್ದಾರಿಗಳನ್ನು ಅಧೀನ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿ ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿ ದ್ದಾರೆ. ಈ ಮೂಲಕ ಈಗಾಗಲೇ ಬೈಂದೂರು ತಾಲೂಕಿನಲ್ಲಿ 70.5ಎಕರೆ, ಕುಂದಾಪುರ- 186.23ಎಕರೆ, ಬ್ರಹ್ಮಾವರ- 202.9ಎಕರೆ, ಉಡುಪಿ- 125 ಎಕರೆ, ಕಾಪು- 139.34 ಎಕರೆ, ಕಾರ್ಕಳ- 225.67ಎಕರೆ, ಹೆಬ್ರಿ- 84.53 ಎಕರೆ ಸೇರಿದಂತೆ ಉಡುಪಿ ಜಿಲ್ಲೆ ಒಟ್ಟು 1034 ಎಕರೆ ಹಡಿಲು ಭೂಮಿ ಯನ್ನು ಜಿಲ್ಲೆಯಲ್ಲಿ ಗುರುತಿಸಿ ಸಂಜೀವಿನಿ ಸದಸ್ಯರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರದವರೆಗೆ 741 ಎಕರೆ ಕೃಷಿ ಭೂಮಿಯಲ್ಲಿ ನೇರ ಬಿತ್ತನೆ ಹಾಗೂ ನಾಟಿಯ ಮೂಲಕ ಬೇಸಾಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗದ್ದೆಗೆ ಇಳಿದ ಸಿಇಓ

ಕುಂದಾಪುರ ತಾಲೂಕಿನ ಅಂಪಾರು ಗ್ರಾಪಂ ವ್ಯಾಪ್ತಿಯ ಹಡಾಳಿಯಲ್ಲಿರುವ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ನಾಟಿ ಮಾಡುವ ಕಾರ್ಯದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್. ಭಾಗವಹಿಸಿದರು. ಕುಂದ ನಾಡು ರೈತ ಉತ್ಪಾದಕ ಸಂಸ್ಥೆ ಹಾಗೂ ಅಂಪಾರು ರೋಟರಿ ಕ್ಲಬ್ ಸಹಯೋಗದಲ್ಲಿ ವನಶ್ರೀ ಸಂಜೀವಿನಿ ಒಕ್ಕೂಟದ ನೂರಾರು ಸದಸ್ಯರು ಭತ್ತದ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.

ಸಭಾ ಕಾರ್ಯಕ್ರಮವನ್ನು ಭತ್ತದ ನೇಜಿಯ ಕಟ್ಟನ್ನು ಬಿಚ್ಚಿ ವಿತರಿಸುವುದರ ಮೂಲಕ ಸಿಇಒ ಪ್ರಸನ್ನ ಎಚ್. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರನ್ನು ಸನ್ಮಾನಿಸಲಾಯಿತು. ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಂತೋಷ್ ಬಲ್ಲಾಡಿ ಮಾತನಾಡಿದರು.

ನಂತರ ಮಳೆಯ ನಡುವೆಯೇ ಗದ್ದೆಗೆ ಇಳಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಭಾರಿ ಮಳೆಯನ್ನು ಲೆಕ್ಕಿಸದೇ ಗದ್ದೆ ಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡಿದರು. ಭತ್ತದ ನೇಜಿಯನ್ನು ನೆಡುವುದರ ಮೂಲಕ ಹಡಿಲು ಭೂಮಿ ಕೃಷಿಯ ಮಾದರಿ ಕಾರ್ಯಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪ, ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಕಾರ್ಯದರ್ಶಿ ಉಮೇಶ್ ಶಾನ್ಕಟ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಶೆಟ್ಟಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಷನಿ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಸದಸ್ಯರು, ಸಂಜೀವಿನಿ ಸದಸ್ಯರು, ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

‘ಉಡುಪಿ ಜಿಲ್ಲೆಯ ಒಂದು ಗ್ರಾಪಂಗೆ ಕನಿಷ್ಟ 10 ಎಕರೆಯಂತೆ ಎಲ್ಲ 150 ಗ್ರಾಪಂಗಳಲ್ಲಿ ಸಂಜೀವಿನಿ ಒಕ್ಕೂಟದ ಮೂಲಕ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡುವ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಕೇವಲ ಎಸಿ ರೂಮಿನಲ್ಲಿ ಕುಳಿತು ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ಮಾಡುವ ಬದಲು ಸ್ವತಃ ನಾನೇ ಗದ್ದೆಗೆ ಇಳಿದು ನಾಟಿ ಉಳುಮೆ ಮಾಡಿ ರೈತರ ಕಷ್ಟವನ್ನು ಅರಿತುಕೊಂಡಿದ್ದೇನೆ. ರೈತರೊಂದಿಗೆ ಇದ್ದು ಈ ಕಾರ್ಯಕ್ಕೆ ಕೈಜೋಡಿಸಿರುವ ಖುಷಿ ನನಗೆ ಇದೆ’

-ಪ್ರಸನ್ನ ಎಚ್., ಸಿಇಓ, ಉಡುಪಿ ಜಿಪಂ


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News