ದಾರಿ ತಪ್ಪುತ್ತಿರುವ ಕರಾವಳಿಯ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಮಧು ಬಂಗಾರಪ್ಪ

Update: 2024-02-04 13:30 GMT

ಕುಂದಾಪುರ: ಕರಾವಳಿ ಭಾಗದ ಕೆಲವು ಶಾಲೆಗಳ ಶಿಕ್ಷಕರು ದಾರಿ ತಪ್ಪುತ್ತಿದ್ದು ಅವರನ್ನು ದಾರಿಗೆ ಕರೆತರುವ ಕೆಲಸ ಮಾಡಲಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಹೇಳಿಕೊಡಬೇಕೆ ಹೊರತು ಯಾವುದೇ ಆಟ ಆಡ ಬಾರದು. ಯಾವ ಪಕ್ಷದ ಪರ ಕೆಲಸ ಮಾಡುವುದು ಶಿಕ್ಷಕರ ಕೆಲಸವಲ್ಲ. ಸರಕಾರದ ಹಣ ಪಡೆಯುತ್ತಿರುವ ಶಿಕ್ಷಕರು, ಮಕ್ಕಳ ಪರ ಕೆಲಸ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಕರ್ತವ್ಯದಲ್ಲಿ ಅಸಡ್ಡೆ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪಎಚ್ಚರಿಕೆ ನೀಡಿದ್ದಾರೆ.

ಕೊಲ್ಲೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿಕ್ಷಕರ ವಿಚಾರದಲ್ಲಿ ಕೆಲವು ವ್ಯತ್ಯಾಸಗಳು ಕಂಡು ಬಂದಿದ್ದು ಒಂದು ಶೇಖಡವು ಅವರನ್ನು ದಾರಿ ತಪ್ಪಲು ಬಿಡುವುದಿಲ್ಲ. ಸರಕಾರಿ ಶಾಲಾ ಮೈದಾನದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುವುದು. ದೇಶದಲ್ಲಿ ಕಾನೂನು, ಅಂಬೇಡ್ಕರ್ ಕೊಟ್ಟ ಸಂವಿಧಾನವಿದೆ. ಸಂವಿಧಾನ ಪೀಠಿಕೆ ಎಲ್ಲಾ ಶಾಲೆಯಲ್ಲಿ ಓದಬೇಕೆಂದು ಕಾನೂನು ಮಾಡಿದ್ದರೂ ಕೆಲವರು ಆಟವಾಡುತ್ತಿದ್ದು ಅವರೆಲ್ಲರೂ ಸಿಕ್ಕಿ ಬೀಳುತ್ತಾರೆ. ಇದೆಕ್ಕೆಲ್ಲಾ ಒಂದು ಸುವ್ಯವಸ್ತೆ ಮಾಡಲಾಗುತ್ತಿದ್ದು ಶಿಕ್ಷಣದಲ್ಲಿ ಭಾವನಾತ್ಮಕ ವಿಚಾರ ತೆಗೆದು ದೇಶ ಭಕ್ತಿ ಬರ ಬೇಕೆಂಬ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ರಾಜ್ಯದಲ್ಲಿ 53 ಸಾವಿರ ಶಿಕ್ಷಕರ ಕೊರತೆಯಿದ್ದು ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಹಂತ- ಹಂತವಾಗಿ ಈ ಸಮಸ್ಯೆ ನಿವಾರಿಸಿ ಸರಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವ ಕಾರ್ಯ ಮಾಡಲಾಗುವುದು. ಶಿಕ್ಷಣ ಇಲಾಖೆ ನನಗೆ ಹೊಸ ಖಾತೆಯಾಗಿದ್ದು ಸವಾಲಿನ ಕೆಲಸವಾಗಿದೆ. ಪೆನ್ ಹಿಡಿಯುವ ಕೈ ಕಸ ಪೊರಕೆ ಹಿಡಿಯಬಾರದು. ಶಿಕ್ಷಕರು, ಮಕ್ಕಳು ಈ ಕೆಲಸ ಮಾಡಬಾರದು. ಪಠ್ಯ ಪುಸ್ತಕದಲ್ಲಿಯೂ ಭಾವನಾತ್ಮಕ ವಿಚಾರ ತುಂಬಿದ್ದರು. ಅದನ್ನು ಪರಿಷ್ಕರಣೆ ಮಾಡುವ ಕೆಲಸ ಮಾಡಲಾಗಿದೆ. ಭಾವನಾತ್ಮಕ ವಿಚಾರದಿಂದ ದೇಶ ಬೆಳವಣಿಗೆಯಾಗಲ್ಲ, ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ ಎಂದು ಅವರು ತಿಳಿಸಿದರು.

ವಿರೋಧ ಪಕ್ಷ ಬಿಜೆಪಿಯು ಕಾಂಗ್ರೆಸ್ ಸರಕಾರದ ಏಳಿಗೆ ಸಹಿಸದೆ ಟೀಕೆ ಮಾಡುತ್ತಿದ್ದು ಮುಂದಿನ ದಿನದಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ. ದೇವರು, ಧರ್ಮದ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ದೂರಿದರು.

ಮೊದಲು ಮಾನವರಾಗಬೇಕು ಮತ್ತು ಮಾನವೀಯತೆ ಬೆಳೆಸಿಕೊಳ್ಳಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಗೆಲವು ಸಾಧಿಸಲಿದೆ. ಹಿಂದುಳಿದ ವರ್ಗಗಳ ವರದಿ ಶೀಘ್ರವಾಗಿ ಜಾರಿ ಮಾಡುವುದು ಒಳ್ಳೆಯದು. ಭಾಗ್ಯಗಳ ಅನುಷ್ಠಾನದ ಜೊತೆಗೆ ಶ್ರೀನಾರಾಯಣ ಗುರು ನಿಗಮ ಮಂಡಳಿಗೆ ಹೆಚ್ಚಿನ ಅನುದಾನ ಮುಂದಿನ ಬಜೆಟ್‌ನಲ್ಲಿ ಮೀಸಲಿರಿಸುವ ವಿಶ್ವಾಸವಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಯಾರೇ ಆದರು ಗೆಲ್ಲುವ ವಿಶ್ವಾಸ ವಿದೆ. ಮೋದಿ ಹೆಸರಲ್ಲಿ ಮತ ಕೇಳಿದರೆ ಜನರು ಉಗಿದು ಕಳಿಸುತ್ತಾರೆ ಎಂದು ಅವರು ಟೀಕಿಸಿದರು. ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಮುಖಂಡರಾದ ರಮೇಶ್ ಗಾಣಿಗ ಕೊಲ್ಲೂರು, ಎಸ್.ರಾಜು ಪೂಜಾರಿ, ಬಾಬು ಹೆಗ್ಡೆ ಮೊದಲಾದವರು ಹಾಜರಿದ್ದರು.

‘ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳಿಸಲಾಗುತ್ತದೆ ಎಂಬುದು ಕೇವಲ ಸುಳ್ಳು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಗ್ಯಾರೆಂಟಿ ಭಾಗ್ಯಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕೆಲವು ವಿಚಾರಗಳಲ್ಲಿ ಅಪಪ್ರಚಾರ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು’

-ಮಧು ಬಂಗಾರಪ್ಪ, ಸಚಿವರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News