ಅಧಿಕಾರ ಕಳೆದುಕೊಂಡ ಬಿಜೆಪಿಯಿಂದ ಹತಾಶ ಪ್ರತಿಕ್ರಿಯೆ:ಸಿಪಿಎಂ
ಉಡುಪಿ, ಜು.28: ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿ ನಲ್ಲಿ ನಡೆದ ಘಟನೆಯನ್ನು ಕೇಂದ್ರೀಕರಿಸಿ, ಇಡೀ ರಾಜ್ಯ ಮತ್ತು ದೇಶ ದಾದ್ಯಂತ ಒಂದು ಸಮೂಹದವರ ಮೇಲೆ ಆರೋಪ ಹೊರಿಸಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯ ಕ್ರಮವು, ಅಧಿಕಾರ ಕಳೆದುಕೊಂಡ ಪಕ್ಷದ ಹತಾಶ ಪ್ರತಿಕ್ರಿಯೆ ಎಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ.
2024ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿಯೂ ಇದರ ಹಿಂದಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ ಸಿಪಿಎಂ, ಹಾಸ್ಟೆಲ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಂಡಿದೆ. ಈ ಕುರಿತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಗಳು ವಿವರಣೆ ನೀಡಿದ್ದು ಅಗತ್ಯ ಮಾಹಿತಿಗಳಿದ್ದರೆ ನೀಡಲು ಸಾರ್ವಜನಿಕರಿಗೆ ವಿನಂತಿಸಿದ್ದಾರೆ ಎಂದು ಹೇಳಿದೆ.
ಆದರೆ ಇಲಾಖೆಗೆ ಸಹಕರಿಸುವ ಬದಲು, ಜನರ ನಡುವೆ ದ್ವೇಷದ ವಾತಾವರಣ ಬಿತ್ತುವ ಬಿಜೆಪಿಯ ಕ್ರಮವು ಜನ ವಿರೋಧಿಯಾಗಿದೆ. ಶಾಂತಿಪ್ರಿಯ ಉಡುಪಿಯ ಜನತೆ ದ್ವೇಷವನ್ನು ಹಬ್ಬುವವರನ್ನು ಹಿಮ್ಮೆಟ್ಟಿಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡುತ್ತದೆ ಎಂದ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.