ಸೇನಾಪುರದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಧರಣಿ
ಕುಂದಾಪುರ : ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ಆಗ್ರಹಿಸಿ ವಿವಿಧ ಸಂಘಟನೆ, ಗ್ರಾಮಸ್ಥರು ಸಮಾಜ ಸೇವಕರು, ತಾಪಂ ಮಾಜಿ ಸದಸ್ಯರು, ಗ್ರಾಪಂ ಸದಸ್ಯರ ನೇತೃತ್ವದಲ್ಲಿ ರವಿವಾರ ಸೇನಾಪುರ ರೈಲು ನಿಲ್ದಾಣದ ಮುಂಭಾಗದಲ್ಲಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸೇನಾಪುರ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಈ ಭಾಗದ ಜನರ ಬಹುದಿನ ಬೇಡಿಕೆಯಾಗಿದ್ದು ರೈಲು ನಿಲುಗಡೆ ಮಾಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಬೇರೆಬೇರೆ ಭಾಗಗಳಿಂದ ಬರುವ ರೈಲು ಪ್ರಯಾಣಿಕರು ಬೈಂದೂರು ನಿಲ್ದಾಣಕ್ಕೆ ಹೋಗಿ ದೂರದ ಊರಿಗೆ ಪ್ರಯಾಣಿಸ ಬೇಕು. ರೈಲು ನಿಲ್ದಾಣ ಜನರಿಗೆ ಉಪಯೋಗಿಯಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ. ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೆ ತರಲಾಗಿದೆ. ತುರ್ತಾಗಿ ಬೆಂಗಳೂರು, ಮುಂಬಯಿ ರೈಲು ಇಲ್ಲಿ ನಿಲ್ಲಬೇಕು ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ, ಕೊಂಕಣ್ ರೈಲ್ವೆ ಚಿಂತಿಸಬೇಕು ಎಂದು ಅವರು ಆಗ್ರಹಿಸಿದರು.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಮಾಜಿ ಅಧ್ಯಕ್ಷ ಶಂಕರ ಶೆಟ್ಟಿ ಬೆಳ್ಳಾಡಿ, ಬೈಂದೂರು ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಪಂ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಕುಂದಾಪುರ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಭು ಕೆನಡಿ ಫಿರೆರಾ, ನಾಡ ಹಾಲು ಉತ್ಪಾದಕರ ಸಹಕಾರಿ ಸಂಘ ನಿವೃತ್ತ ವ್ಯವಸ್ಥಾಪಕ ವೆಂಕಟರಮಣ ಗಾಣಿಗ, ಹಕ್ಲಾಡಿ ಗ್ರಾಪಂ ಸದಸ್ಯ ಬಸವ ಪಿ.ಮೊಗವೀರ ಮಾತನಾಡಿದರು.
ಈ ಕುರಿತು ಕೊಂಕಣ ರೈಲ್ವೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ತಾಪಂ ಮಾಜಿ ಸದಸ್ಯ ಸತೀಶ್ ಎಂ.ನಾಯಕ್, ನಾಡಾ ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಶೆಟ್ಟಿ,ಉದ್ಯಮಿ ಸುರೇಶ ಶೆಟ್ಟಿ, ವಿವಿಧ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಅಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.