ಮಣಿಪುರ ಹಿಂಸಾಚಾರದ ಹಿಂದೆ ಹಿಂದುತ್ವದ ವಿಭಜನಕಾರಿ ನೀತಿ: ಪ್ರೊ.ಫಣಿರಾಜ್

Update: 2023-07-24 15:03 GMT

ಉಡುಪಿ, ಜು.24: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಿಂದುತ್ವದ ವಿಭಜನಕಾರಿ ನೀತಿ ಅಡಗಿದೆ. ಈ ನೀತಿಯನ್ನು ಬಿಜೆಪಿ ಇಡೀ ದೇಶದಾದ್ಯಂತ ಹಬ್ಬುತ್ತಿದೆ. ಇದೀಗ ಈಶಾನ್ಯ ಭಾರತದಲ್ಲಿ ಬುಡಕಟ್ಟು ಜನರ ಮೇಲೆ ಈ ನೀತಿಯನ್ನು ಅನುಸರಿಸಿ ವಿಭಜಿಸಿ ಅಳಲು ಪ್ರಯತ್ನ ಮಾಡುತ್ತಿದೆ. ಈ ವಿಭಜನಕಾರಿ ನೀತಿಗೆ ಪ್ರಧಾನಿ ಮೋದಿ ಅನು ಮೋದನೆ ನೀಡುತ್ತಿದ್ದಾರೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಆರೋಪಿಸಿದ್ದಾರೆ.

ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆಯುತ್ತಿರುವ ಹಿಂಸಾಚಾರದ ಹಿಂದಿನ ರಾಜಕೀಯ ಮತ್ತು ಜನಾಂಗೀಯ ದ್ವೇಷದ ಕಾರಣಕ್ಕೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಯುವತಿಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಉಡುಪಿ ಜಿಲ್ಲೆ, ಎಸ್‌ಐಓ ಉಡುಪಿ ಜಿಲ್ಲೆ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ವತಿಯಿಂದ ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮಣಿಪುರದ ಹಿಂಸಾಚಾರದಲ್ಲಿ ವಿಭಜನಕಾರಿ ನೀತಿಯೊಂದಿಗೆ ಬಂಡವಾಳ ಶಾಹಿಗಳ ಷಡ್ಯಂತ್ರ ಅಡಗಿದೆ. ಕುಕಿ ಸಮುದಾಯ ವಾಸವಿರುವ ಗುಡ್ಡಗಾಡು ಪ್ರದೇಶಗಳನ್ನು ಅಕ್ರಮಿಸಿಕೊಂಡು ಈಗಾಗಲೇ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಎಣ್ಣೆ ಬೀಜ ಬೆಳೆಸುವ ಹುನ್ನಾರ ಕೂಡ ನಡೆಯುತ್ತಿದೆ. ಈ ಮೂಲಕ ಅದಾನಿಗೆ ಆ ಪ್ರದೇಶ ಮಾರಲು ಹೊರಟಿದೆ. ಈ ಎಲ್ಲ ಕಾರಣ ಮುಂದಿಟ್ಟುಕೊಂಡು ಈ ಎರಡು ಸಮುದಾಯದ ನಡುವೆ ಕಚ್ಚಾಟ ನಡೆಸ ಲಾಗುತ್ತಿದೆ ಎಂದು ಅವರು ದೂರಿದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಸಮುದಾಯ ದೌರ್ಜನ್ಯಕ್ಕೊಳಕ್ಕಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಲಾಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರಕಾರ ಮೌನ ವಹಿಸಿದೆ. ಇಂತಹ ಸಮಯದಲ್ಲಿ ಸಂತ್ರಸ್ಥರ ಪರವಾಗಿ ನಾವು ದನಿಯೆತ್ತರಿಸಬೇಕಾಗಿದೆ ಎಂದು ಹೇಳಿದರು.

ಸನೆಟ್ ಬೋರ್ಬೊಝಾ ಮಾತನಾಡಿದರು. ನಂತರ ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್‌ಬೆಟ್ಟು, ಎಸ್‌ಐಓ ರಾಜ್ಯ ಕಾರ್ಯದರ್ಶಿ ಅಫ್ವಾನ್ ಹೂಡೆ, ಸಾಲಿಡಾರಿಟಿ ಹೂಡೆ ಘಟಕಾಧ್ಯಕ್ಷ ಜಾಬೀರ್ ಖತೀಬ್, ಸಾಲಿಡಾರಿಟಿ ಮಲ್ಪೆ ಕಾರ್ಯದರ್ಶಿ ಶುಐಬ್ ಮಲ್ಪೆ, ಉಡುಪಿಯ ಕಾರ್ಯದರ್ಶಿ ಫೈಸಲ್ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಕುಲ್ಸುಮ್ ಅಬುಬಕ್ಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News