ಸೌಜನ್ಯ ಪ್ರಕರಣಕ್ಕೆ ಸರಕಾರದಿಂದ ತಾರ್ಕಿಕ ಅಂತ್ಯದ ನಿರೀಕ್ಷೆ : ಮಹೇಶ್ ಶೆಟ್ಟಿ ತಿಮರೋಡಿ

Update: 2023-08-25 14:36 GMT

ಕುಂದಾಪುರ, ಆ.25: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ತಾರ್ಕಿಕ ಅಂತ್ಯ ಕೊಡುತ್ತದೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಈ ಬಗ್ಗೆ ಯಾರ ವೈಯಕ್ತಿಕ ಅಭಿಪ್ರಾಯಗಳಿಗೂ ಪ್ರತಿಕ್ರಿಯೆ ನೀಡಲ್ಲ ಎಂದು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

ಇಲ್ಲಿ ಶನಿವಾರ ನಡೆದ ಜನಾಗ್ರಹ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರಕಾರ ಮಾಡಿರುವ ತಪ್ಪನ್ನು ಈಗಿನ ಸರ್ಕಾರ ಮಾಡಲ್ಲ ಎನ್ನುವ ಭರವಸೆ ಇದೆ. ಅಧಿಕಾರಿಗಳು ಹಾಗೂ ಕಾನೂನು ಹಂತದಲ್ಲಿ ಆಗಿರುವ ತಪ್ಪುಗಳಿಗೆ ಕಾರಣರು ಯಾರು? ಇದರ ಹಿಂದೆ ಇದ್ದವರು ಯಾರು ಎನ್ನುವುದು ಸರಿಯಾದ ತನಿಖೆಯಿಂದ ಬಯಲಿಗೆ ಬರಬೇಕಾಗಿದೆ ಎಂದರು.

ಪ್ರಕರಣದ ತನಿಖೆಯ ಪ್ರಾರಂಭಿಕ ಹಂತದಲ್ಲಿದ್ದ ಅಧಿಕಾರಿಯೊಬ್ಬರು ಮಾತನಾಡಿರುವ ದಾಖಲೆಗಳನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾ ಗುವುದು. ಈ ಅಧಿಕಾರಿಗೆ ನ್ಯಾಯಾಲಯಕ್ಕೆ ಹೋಗಿ ಆಗಿರುವ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದೇನೆ. ನನ್ನಲ್ಲಿ ಮಾತನಾಡಿರುವ ಬಗ್ಗೆ ಬೇಕಾದರೆ ಮೊಬೈಲ್ ಸಂಭಾಷಣೆಯ ದಾಖಲೆಗಳನ್ನು ತೆಗೆಸಲಿ ಎಂದರು.

ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲಿಯೂ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ. ಕಾನೂನು ರೀತಿಯ ಹೋರಾಟದ ಬಗ್ಗೆಯೂ ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ. ಕಾನೂನಿಗಿಂತ ಜನಶಕ್ತಿಯ ಹೋರಾಟದಲ್ಲಿ ನಂಬಿಕೆ ಇರುವುದರಿಂದ ಜನಾಗ್ರಹ ಸಭೆಯ ಮೂಲಕ ನ್ಯಾಯಕ್ಕಾಗಿ ಒತ್ತಡ ಹಾಕುತ್ತಿದ್ದೇವೆ ಎಂದ ಅವರು, ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರಾಜಕೀಯ ಪಕ್ಷಗಳು ಎಲ್ಲವೂ ಒಂದೇ. ಆದರೆ ನ್ಯಾಯಪೀಠ ಹಾಗೂ ಧರ್ಮದ ವ್ಯವಸ್ಥೆಯ ಬಗ್ಗೆ ರಾಜಕಾರಣಿಗಳು ನಂಬಿಕೆ ಇರಿಸಿಕೊಳ್ಳಬೇಕು ಎಂದರು.

ಸೌಜನ್ಯ ಅವರ ತಾಯಿ ಕುಸುಮಾವತಿ, ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ, ಸುಧೀರ್ ಮಲ್ಯಾಡಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News