ನಕಲಿ ಪರಶುರಾಮ ಮೂರ್ತಿ ಪ್ರಕರಣ: ಆರೋಪಿ ಕೃಷ್ಣ ನಾಯ್ಕ ಆರು ದಿನ ಪೊಲೀಸ್ ಕಸ್ಟಡಿಗೆ
ಉಡುಪಿ: ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಬೆಂಗಳೂರಿನ ಶಿಲ್ಪಿ ಕೃಷ್ಣ ನಾಯ್ಕ(45)ನನ್ನು ಕಾರ್ಕಳ ಪೊಲೀಸರು ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಆರೋಪಿ, ನಿರೀಕ್ಷಣಾ ಜಾಮೀನಿಗಾಗಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿ ಯನ್ನು ಕೂಡ ನ್ಯಾಯಾಲಯ ವಜಾಗೊಳಿಸಿತು.
ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೃಷ್ಣ ನಾಯ್ಕ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಕಾರ್ಕಳ ಪೊಲೀಸರು, ಆರೋಪಿಯನ್ನು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಮಾಹೆ ಎಂಬಲ್ಲಿ ನ.10ರಂದು ಬಂಧಿಸಿದರು.
ಅಲ್ಲಿಂದ ಕಾರ್ಕಳಕ್ಕೆ ಕರೆತಂದ ಪೊಲೀಸರು, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಆರೋಪಿಯನ್ನು ಇಂದು ಬೆಳಗ್ಗೆ ಕಾರ್ಕಳ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಕೋರ್ಟಿಗೆ ಹಾಜರು ಪಡಿಸಿದರು. ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಿರುವುದರಿಂದ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಸಹಾಯಕ ಸರಕಾರಿ ಅಭಿಯೋಜಕಿ ಸೀತಾ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯವು ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ನ.16ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶ ನೀಡಿತು.
ಪರಶುರಾಮ ಥೀಮ್ ಪಾರ್ಕ್ ವಿಚಾರವು ಸಾಕಷ್ಟು ವಿವಾದಕ್ಕೆ ಕಾರಣವಾಗಿ ರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿರುವ ಆರೋಪಿ ಕೃಷ್ಣ ನಾಯ್ಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಪರಶುರಾಮ ಮೂರ್ತಿಯ ಮೇಲ್ಭಾಗವನ್ನು ಪತ್ತೆ ಹಚ್ಚಬೇಕಾಗಿದ್ದು, ಮೂರ್ತಿಗೆ ಸಂಬಂಧಿಸಿದ ಹಣಕಾಸು ವ್ಯವಹಾರ ಮತ್ತು ಇದರಲ್ಲಿ ಯಾರೆಲ್ಲ ಭಾಗಿಗಳಾಗಿದ್ದಾರೆಂಬ ಮಾಹಿತಿಯನ್ನು ಕೂಡ ಕಳೆ ಹಾಕಬೇಕಾಗಿದೆ ಎಂದು ತಿಳಿದುಬಂದಿದೆ.
ಕೃಷ್ಣ ನಾಯಕ್ ಕೃಷ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲವಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆಸಿದ್ದು, ನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ನಲ್ಲೂರಿನ ಕೃಷ್ಣ ಶೆಟ್ಟಿ ಜೂನ್ ತಿಂಗಳಲ್ಲಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.