ಭಾರತದಲ್ಲಿ ನರಮೇಧದ ತುರ್ತು ಪರಿಸ್ಥಿತಿ: ಹಿರಿಯ ಚಿಂತಕ ಶಿವಸುಂದರ್ ಆತಂಕ

Update: 2023-08-02 15:07 GMT

ಉಡುಪಿ: ಸಹಜೀವಿಗಳಾಗಿದ್ದ ಒಂದು ಜನಾಂಗವನ್ನು ಅನ್ಯಗೊಳಿಸುವುದು ಮತ್ತು ಕೊಲ್ಲುವುದು ನರಮೇಧದ ಲಕ್ಷಣವಾಗಿದೆ. ಈಗ ನಮ್ಮಲ್ಲಿ ನಡೆಯುತ್ತಿರುವುದು ನರಮೇಧದ ವಿವಿಧ ಹಂತಗಳಾಗಿವೆ. ಗುಜರಾತಿನಲ್ಲಿ ಪ್ರಾರಂಭಗೊಂಡದ್ದು ಈಗ ಮಣಿಪುರದಲ್ಲಿ ಉತ್ತುಂಗದಲ್ಲಿದೆ ಎಂದು ಹಿರಿಯ ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಉಡುಪಿ ಜಿಲ್ಲಾ ಸಮಾನ ಮಾನಸ್ಕರ ವೇದಿಕೆಯ ನೇತೃತ್ವದಲ್ಲಿ ಬುಧವಾರ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಜಗತ್ತಿನ ನರಮೇಧ ಅಧ್ಯಯನಕಾರ ಗ್ರೆಗರಿ, ಜಗತ್ತಿನಲ್ಲಿ ಪ್ರಜಾತಂತ್ರಗಳು ಯಾವ ರೀತಿಯ ನರಮೇಧ ಮಾಡುವ ಹಂತಕ ಸಮಾಜವಾಗಿ ಬದಲಾಗು ತ್ತದೆ ಎಂಬುದನ್ನು ಅಧ್ಯಯನದಿಂದ ಕಂಡುಕೊಂಡಿದ್ದರು. ಅತ್ಯಂತ ಅನಾಹುತಕಾರಿ ಹಂತದಲ್ಲಿರುವುದನ್ನು ನರಮೇಧದ ತುರ್ತುಸ್ಥಿತಿ, ಎರಡನೆ ಹಂತವನ್ನು ನರಮೇಧದ ಎಚ್ಟರಿಕೆ ಮತ್ತು ಮೂರನೇ ಹಂತವನ್ನು ನರಮೇಧಕ್ಕೆ ಹೊಂಚು ಎಂಬುದಾಗಿ ಮೂರು ರೀತಿಯಲ್ಲಿ ವಿಂಗಡೆ ಮಾಡಲಾಗಿದೆ. ಕಳೆದ ಎಂಟು ವರ್ಷಗಳಿಂದ ಭಾರತವು ಮೂರನೇ ಹಂತದಿಂದ ಎಚ್ಚರಿಕೆ ಹಂತಕ್ಕೆ ಬಂದು ಇದೀಗ ತುರ್ತು ಪರಿಸ್ಥಿತಿಯಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಳೆದ 90 ದಿನಗಳಿಂದ ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಿರುವ ಏಕಮುಖಿ ಅತ್ಯಾಚಾರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ಕೇವಲ ಅಕಸ್ಮಿಕವಲ್ಲ. ನೇರವಾಗಿ ಭಾಗಿಯಾಗಿದ್ದಾರೆ. ಅದು ದುರುದ್ದೇಶದಿಂದ ಕೂಡಿದ ಮೌನವಾಗಿದೆ. ಪ್ರಧಾನಿ ಮೌನದ ಹಿಂದೆ ಸರಕಾರ ನೇರ ಹಸ್ತಕ್ಷೇಪ ಇದೆ. ಪ್ರಧಾನಿ ಮೌನವನ್ನು ಆಯುಧವನ್ನಾಗಿ ಮಾಡಿದಾಗ ಜನ ಮಾತು, ಪ್ರತಿಭಟನೆಯನ್ನು ಆಯುಧವನ್ನಾಗಿಸಬೇಕಾಗಿದೆ ಎಂದರು.

ಮಣಿಪುರದಲ್ಲಿ ಕೂಕಿಗಳ ಬಗ್ಗೆ ಧ್ವೇಷವನ್ನು ಬಹಳ ವ್ಯವಸ್ಥಿತವಾಗಿ ಹುಟ್ಟು ಹಾಕಿ, ಗುಜರಾತ್ ಮಾದರಿಯಲ್ಲಿಯೇ ಹಿಂಸಾಚಾರ ನಡೆಸುತ್ತಿದ್ದಾರೆ. ಇದು ಕೇವಲ ಮಣಿಪುರದ ಘಟನೆ ಅಥವಾ ಕ್ರಿಶ್ಚಿಯನ್ನರ ಮೇಲೆ ಆಗುತ್ತಿರುವ ಹಿಂಸೆ ಅಲ್ಲ. ಇದನ್ನು ನೆಪವಾಗಿ ಇಟ್ಟುಕೊಂಡು ಇಡೀ ಈಶಾನ್ಯ ಭಾರತದಲ್ಲಿ ಹಿಂದುತ್ವ ಭಾರತದ ಪರಿಕಲ್ಪನೆಯ ಭಾಗವಾಗಿ ಹಿಂಸೆ ನಡೆಸಲಾಗುತ್ತಿದೆ ಎಂದು ಅವರು ದೂರಿದರು.

ಮಹಿಳಾ ಹೋರಾಟಗಾರ್ತಿ ಜಾನೆಟ್ ಬರ್ಬೋಜಾ ಮಾತನಾಡಿ, ಮಣಿಪುರದಲ್ಲಿ ಬೆತ್ತಲಾಗಿರುವುದು ಮಹಿಳೆಯರಲ್ಲ, ಬದಲು ಡಬಲ್ ಇಂಜಿನ್ ಸರಕಾರ, ಪ್ರಧಾನಿ ನರೇಂದ್ರ ಮೋದಿ, ಭಾರತ ಮಾತೆ ಹಾಗೂ ಮಾಧ್ಯಮಗಳು. ಮನ್ ಕೀ ಬಾತ್ ಮೂಲಕ ಜನರನ್ನು ಮಂಕಿ ಮಾಡಿದ ಪ್ರಧಾನಿಗೆ ಮಣಿಪುರ ಹೆಣ್ಣು ಮಕ್ಕಳ ದಿಲ್ ಕೀ ಬಾತ್ ಕೇಳದಿರುವುದು ದುರಂತ. ಇವರೆಲ್ಲ ಹೃದಯ ಕಲ್ಲೇ? ಇವರಿಗೆ ಸಂಸ್ಕಾರ ಇಲ್ಲವೇ? ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡಿ, ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಹಿರಿಯ ಚಿಂತಕ ಪ್ರೊ.ಫಣಿರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಸಂಸ ಅಂಬೇಡ್ಕರ್‌ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಉಡುಪಿ ಬಿಷಪ್ ಅತೀ ವಂ.ಜೆರಾಲ್ಡ್ ಐಸಾಕ್, ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ.ಅಲ್ಮೇಡಾ, ಇಫ್ಕಾ ಜಿಲ್ಲಾ ಗೌರವಾಧ್ಯಕ್ಷ ಲೂವಿಸ್ ಲೋಬೊ, ಸಮಾನ ಮಾನಸ್ಕರ ವೇದಿಕೆಯ ಸಂಚಾಲಕ ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು. ಫಾ.ಡೆನ್ನೀಸ್ ಡೇಸಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನಾ ಉಡುಪಿ ಶೋಕಾ ಮಾತ ಇಗರ್ಜಿ ಯಿಂದ ಹೊರಟ ಕಾಲ್ನಡಿಗೆ ಜಾಥವು ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಕೆ.ಎಂ.ಮಾರ್ಗ, ಕೋರ್ಟ್ ರಸ್ತೆ ಮಾರ್ಗವಾಗಿ ಮಿಷನ್ ಕಂಪೌಂಡ್‌ಗೆ ಆಗಮಿಸಿತು. ಜಾಥದಲ್ಲಿ ಸಹಸ್ರಾರು ಸಂಖ್ಯೆಯ ಜನ ಪಾಲ್ಗೊಂಡಿದ್ದರು. ಮಣಿಪುರ ಹಿಂಸಾಚಾರ ಖಂಡಿಸುವ ನಿಟ್ಟಿನಲ್ಲಿ ಬಹುತೇಕ ಪ್ರತಿಭಟನಕಾರರು ಕಪ್ಪುಬಟ್ಟೆ ಹಾಗೂ ಪಟ್ಟಿಯನ್ನು ಧರಿಸಿದ್ದರು.

ಕೈಯಲ್ಲಿ ಶಸ್ತ್ರಾಸ್ತ್ರ, ಒಳಗಡೆ ದ್ವೇಷ ಹಾಗೂ ಸರಕಾರ ಬೆಂಬಲ ಇದ್ದರೆ ಏನೆಲ್ಲ ಆಗುತ್ತದೆಯೋ ಅದೆಲ್ಲವೂ ಮಣಿಪುರದಲ್ಲಿ ಇಂದು ನಡೆಯುತ್ತಿದೆ. ಅಲ್ಲಿನ ಜನರು ಒಟ್ಟುಗೂಡಿ ಬದುಕಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಣಿಪುರದಲ್ಲಿ ನಡೆದಿರುವುದು ಧ್ವೇಷದ ಅತ್ಯಾಚಾರವೇ ಹೊರತು ಕಾಮದ ಅತ್ಯಾಚಾರ ಅಲ್ಲ. ಈ ಧ್ವೇಷ ಇದೀಗ ದೇಶಾದ್ಯಂತ ಹಬ್ಬುತ್ತಿದೆ ಎಂದು ಶಿವಸುಂದರ್ ಆರೋಪಿಸಿದರು.

ಈ ಧ್ವೇಷದ ರಾಜಕಾರಣ ನಿಲ್ಲಬೇಕಾದರೆ ಮನುಷ್ಯತ್ವವನ್ನು ಮರುಸ್ಥಾಪಿಸಲು ಇಂತಹ ಶಕ್ತಿಯನ್ನು ಒಗ್ಗಟ್ಟು, ಮಾತು ಹಾಗೂ ಹೋರಾಟದಿಂದ ಸೋಲಿಸ ಬೇಕು. ಇದು ಮಾತ್ರ ಈ ದೇಶವನ್ನು ಉಳಿಸಲು ಇರುವ ಏಕೈಕ ದಾರಿಯಾಗಿದೆ. ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಕೊಡಬೇಕು. ಕೂಕಿಗಳಿಗೆ ವಿಶ್ವಾಸ ಬರುವವರೆಗೆ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಬೇಕು. ನಿರಂತರ ದೌರ್ಜನ್ಯ ಎಸಗುತ್ತಿರುವ ಶಸ್ತ್ರಾಸ್ತ್ರ ಪಡೆಯ ಅಧಿಕಾರ ಕಿತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.













Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News