ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆ: ಹಲವೆಡೆ ವಿದ್ಯುತ್ ವ್ಯತ್ಯಯ
Update: 2024-04-20 04:07 GMT
ಉಡುಪಿ: ಕಳೆದ ರಾತ್ರಿಯಿಂದ ಉಡುಪಿ ಜಿಲ್ಲೆಯಾದ್ಯಂತ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿರುವ ಬಗೆ ವರದಿಯಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಗುಡುಗು ಮಿಂಚಿನೊಂದಿಗೆ ಆರಂಭವಾದ ಮಳೆ ಇಂದು ಬೆಳಗ್ಗೆವರೆಗೂ ಮುಂದುವರೆದಿದೆ. ಉಡುಪಿ ನಗರ ಕಾಪು ಬ್ರಹ್ಮಾವರ ಕುಂದಾಪುರ ಕಾರ್ಕಳ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.
ಮಧ್ಯರಾತ್ರಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದ್ದು ಇದರಿಂದ ಕೆಲವು ಕಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿ, ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗೆ ತಿಳಿದು ಬಂದಿದೆ. ಭಾರಿ ಮಳೆಯಿಂದಾಗಿ ಉಡುಪಿ ನಗರದ ಕಾಡಬೆಟ್ಟು ಎಂಬಲ್ಲಿರುವ ಚರಂಡಿ ಕೊಚ್ಚಿ ಹೋಗಿ ಹಾನಿಯಾಗಿದೆ.
ಈ ಅಕಾಲಿಕ ಮಳೆಯು ಬಿಸಿಲಿನಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನತೆಗೆ ತಂಪಿನ ವಾತಾವರಣ ಸೃಷ್ಟಿಸಿದೆ. ಮಳೆಯಿಂದಾಗಿ ಇಂದು ನಡೆಸಲು ಉದ್ದೇಶಿಸಿದ್ದ ಚುನಾವಣಾ ಸಂಬಂಧ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದೆ.