ಕಾರ್ಕಳ ಶಾಸಕರಿಂದ ಪರಶುರಾಮರಿಗೆ ಘೋರ ಅಪಚಾರ: ಪ್ರಮೋದ್ ಮುತಾಲಿಕ್
ಉಡುಪಿ, ಅ.17: ಕಂಚಿನದ್ದೆಂದು ಹೇಳಿ ನಕಲಿ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪರಶುರಾಮರಿಗೆ ಅತ್ಯಂತ ಘೋರ ಅಪಚಾರ, ಅವಮಾನ, ದ್ರೋಹ ಬಗೆದಿದ್ದಾರೆ. ಸ್ವಾರ್ಥಿ ಹಾಗೂ ನೀಚ ರಾಜಕಾರಣಿ ಸುನಿಲ್ ಕುಮಾರ್ ಹಿಂದುತ್ವದ ಹೆಸರಿನಲ್ಲಿ ದೇವರು ಹಾಗೂ ದೇವಸ್ಥಾನವನ್ನು ಸಹ ಬಿಡಲಿಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಕಾರ್ಕಳ ತಾಲೂಕು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್‌ನ ಹೆಸರಿನಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ನಡೆಸಿದ ಅವ್ಯವಹಾರ ಹಾಗೂ ಪರಶುರಾಮನ ಕಂಚಿನ ಮೂರ್ತಿಯ ಹೆಸರಿನಲ್ಲಿ ಸ್ಥಾಪಿಸಿದ ನಕಲಿ ಮೂರ್ತಿ ವಿರುದ್ಧ ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಸುನಿಲ್ ಕುಮಾರ್ ಅವರು ತನ್ನ ಬ್ರಹ್ಮಾಂಡ ಭ್ರಷ್ಚಾಚಾರದ ಮೂಲಕ ಇಡೀ ರಾಜ್ಯದ ಹಿಂದುಗಳು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.
ದೇವರು, ದೇವಸ್ಥಾನಗಳ ಭಯವಿಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಅವುಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಎಲ್ಲರಿಗೂ ಮಾದರಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ನಾಡಿನಲ್ಲಿ ಜಮದಗ್ನಿ ಅರಾಧಕರು ಪರಶುರಾಮನ ಅರಾಧನೆ ಮಾಡುತ್ತಾರೆ. ಪರಶುರಾಮನ ಕೀರ್ತಿ, ಪ್ರಭಾವ ದಿಂದಾಗಿ ಅವರು ದೇವರು ಎನ್ನುವ ನಂಬಿಕೆ ಇದೆ. ತುಳುನಾಡಿನ ಸೃಷ್ಟಿಕರ್ತ ಎಂದೂ ಹೆಳುತ್ತಾರೆ. ಇಂತಹ ಪರಶುರಾಮ ನಿಗೆ ಅತ್ಯಂತ ಘೋರ ಅಪಚಾರ ಅಪಮಾನ ದ್ರೋಹ ಬಗೆದ ನೀಚ ರಾಜಕಾರಣಿ ಸುನಿಲ್ ಕುಮಾರ್. ಹಿಂದೂ ಸಂಸ್ಕೃತಿ, ಧರ್ಮ ಎಂದು ಬೆಳೆದ ವ್ಯಕ್ತಿ ಈ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದು ನಾಚಿಕೆಗೇಡು ಎಂದವರು ಹೇಳಿದರು.
ರಾಜಿನಾಮೆಗೆ ಆಗ್ರಹ: ಪರಶುರಾಮನ ಹೆಸರಿನಲ್ಲಿ ಇಷ್ಟೊಂದು ಅವ್ಯವಹಾರ, ಭ್ರಷ್ಟಾಚಾರ ನಡೆಸಿದ ವ್ಯಕ್ತಿ ಇನ್ನೂ ಅಧಿಕಾರಕ್ಕೆ ಅಂಟಿಕೊಂಡು ಕೂತಿರುವುದು ನಾಚಿಕೆಗೇಡು. ಶಾಸಕನಾಗಿ ಪರಶುರಾಮನಿಗೆ ಮಾಡಿದ ಅಪಚಾರಕ್ಕೆ ಕ್ಷಮೆ ಕೋರಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಭ್ರಷ್ಟಾಚಾರ ನಡೆಸಿದವರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಪರಶುರಾಮ ಥೀಮ್ ಪಾರ್ಕ್‌ನ ಕಾಮಗಾರಿಯನ್ನು ನಿಲ್ಲಿಸಿ, ಸಮಗ್ರ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮೂರ್ತಿ ನಕಲಿ ಎಂದು ಗೊತ್ತಿದ್ದೂ ಪ್ರವಾಸೋದ್ಯಮ ಇಲಾಖೆ ಕೋಟಿ ಕೋಟಿ ಹಣ ಬಿಡುಗಡೆ ಮಾಡಿರುವುದು ತನಿಖೆ ಯಾಗಬೇಕು, ಗೋಮಾಳದ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಅನುಮತಿ ಇಲ್ಲ ಎಂದು ಆದೇಶ ಮಾಡಿದ್ದರೂ ಕಟ್ಟಡ ನಿರ್ಮಿಸಿದ ಶಾಸಕರನ್ನು ಬಂಧಿಸಬೇಕು. ಮತ್ತು ಇಡೀ ಥೀಮ್ ಪಾರ್ಕ್ ನಿರ್ಮಾಣದ ಬಗ್ಗೆ ಸಮಗ್ರ ತನಿಖೆಯಾಗ ಬೇಕು ಎಂದರು.
ಶಾಸಕರು ನಡೆಸಿದ ಅಕ್ರಮಗಳಿಗೆ ಸಹಕರಿಸಿದ ಡಿಸಿ, ತಹಶೀಲ್ದಾರ್ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು. ಇವರ ವಿರುದ್ಧವೂ ತನಿಖೆಯಾಗಿ ಕ್ರಮಕೈಗೊಳ್ಳಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದರು.
ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಕನಿಷ್ಠ ಒಂದು ವರ್ಷ ಬೇಕೆಂದು ಇಂಜಿನಿಯರ್ ಹೇಳಿದ್ದರೆ, ವಿಗ್ರಹ ಪ್ರತಿಷ್ಠಾಪನೆ ಸೇರಿದಂತೆ ಪಾರ್ಕ್‌ನ್ನು ಕೇವಲ 41 ದಿನಗಳಲ್ಲಿ ನಿರ್ಮಿಸಿ ಉದ್ಘಾಟನೆಯನ್ನು ತರಾತುರಿ ಯಿಂದ ನಡೆಸಲಾಗಿದೆ. ಆ ಜಾಗದಲ್ಲಿ ಕಟ್ಟಡ, ಮೂರ್ತಿ ಕಟ್ಟಲು ಅನುಮತಿ ಇರಲಿಲ್ಲ. ಕಂದಾಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಡಿಸಿ, ತಹಶೀಲ್ದಾರ್ ಆದೇಶ ಧಿಕ್ಕರಿಸಿ ಕಟ್ಟಡ ನಿರ್ಮಾಣ ಆಗಿದೆ. ಸಾಮಾನ್ಯ ವ್ಯಕ್ತಿ ಹೀಗೆ ಮಾಡಿದ್ದರೆ ಅದನ್ನು ಬುಲ್ಡೊಜರ್‌ನಲ್ಲಿ ನೆಲಸಮ ಮಾಡುತಿದ್ದರು. ಆದರೆ ಇಂಥ ಕಾನೂನು ಬಾಹಿರ ಕಟ್ಟಡ ಉದ್ಘಾಟನೆಗೆ ಬಂದ ಮುಖ್ಯಮಂತ್ರಿ ಸಕ್ರಮದ ಮುದ್ರೆ ಒತ್ತಿ ಹೋಗುತ್ತಾರೆ. ಸುನಿಲ್‌ಕುಮಾರ್ ಚುನಾವಣೆಯ ಗೆಲುವಿಗಾಗಿ ಥೀಮ್ ಪಾರ್ಕ್‌ನ್ನು ಅಪವಿತ್ರಗೊಳಿಸಿದ್ದಾರೆ. ಹೀಗಾಗಿ ಮೂರ್ತಿಗೆ ಸಂಬಂಧಿಸಿದಂತೆ ಎಲ್ಲವೂ ತನಿಖೆ ಅಗಬೇಕು. ಆಮೇಲೆ ಕಾಮಗಾರಿ ಮುಂದುವರೆಸಿ ಎಂದರು.
ಈ ಬಗ್ಗೆ ಸಮಗ್ರ ತನಿಖೆ ಆಗುವವರೆಗೆ ಅಲ್ಲಿ ಮತ್ತೆ ಮೂರ್ತಿ ಕೂರಿಸಲು ನಾವು ಅವಕಾಶ ಕೊಡುವುದಿಲ್ಲ. ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ಅಲ್ಲಿದ್ದ ಮೂರ್ತಿಯನ್ನು ಅಪಮಾನಕರ ರೀತಿಯಲ್ಲಿ ತೆಗೆದು ಅಪಚಾರ ಮಾಡಿದ್ದು ಕಾಂಗ್ರೆಸ್. ಪೋಲಿಸ್ ಇಲಾಖೆ ಇಟ್ಟುಕೊಂಡು ಅದನ್ನು ರಾತ್ರಿ ಸಾಗಿಸುತ್ತಾರೆ ಎಂದರೆ ಸರಕಾರದ ಶಾಮೀಲು ಇಲ್ಲದೇ ಇದು ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದರು.
ಈ ಸಂದರ್ಭದಲ್ಲಿ ರಾಮಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ಸುದರ್ಶನ ಪೂಜಾರಿ, ಕೀರ್ತಿರಾಜ್ ಕಿದಿಯೂರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗೆ ಮನವಿ
ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ಹಗರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು. ಡಿಸಿ ಅನುಪಸ್ಥಿತಿಯಲ್ಲಿ ಎಡಿಸಿ ಮಮತಾದೇವಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗಂಗಾಧರ ಕುಲಕರ್ಣಿ, ಜಯರಾಮ ಅಂಬೆಕಲ್ಲು, ಆನಂದ ಶೆಟ್ಟಿ, ಸುದರ್ಶನ್ ಪೂಜಾರಿ, ಸುದೀಪ್ ನಿಟ್ಟೂರು, ನಿತೇಶ್ ಪೂಜಾರಿ ಉಪಸ್ಥಿತರಿದ್ದರು.