ಜಿಲ್ಲೆಯನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲಿ ಸಹಕರಿಸಿ: ಉಡುಪಿ ಡಿಸಿ ಡಾ.ಕೆ. ವಿದ್ಯಾಕುಮಾರಿ ಮನವಿ

Update: 2024-10-22 15:17 GMT

ಉಡುಪಿ:ಜಿಲ್ಲೆಯ ಎಲ್ಲಾ ಹೈನುಗಾರರು ತಮ್ಮ ಜಾನುವಾರುಗಳಿಗೆ ಪ್ರತಿಶತ ನೂರರಷ್ಟು ಕಾಲು ಬಾಯಿ ಜ್ವರ ರೋಗ ಲಸಿಕೆಯನ್ನು ಹಾಕಿಸುವ ಮೂಲಕ ಜಿಲ್ಲೆಯನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಸಹಕರಿ ಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮನವಿ ಮಾಡಿದ್ದಾರೆ.

ಸೋಮವಾರ ಬ್ರಹ್ಮಾವರ ಸಮೀಪದ ನೀಲಾವರ ಗೋಶಾಲೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಜಿಲ್ಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಕಾಲುಬಾಯಿ ರೋಗವು ಜಾನುವಾರುಗಳಿಗೆ ಮಾರಣಾಂತಿಕ ಕಾಯಿಲೆ ಯಾಗಿದ್ದು, ಈ ರೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ೬ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅ.೨೧ರಿಂದ ನ.೨೦ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯ ಎಲ್ಲಾ ಹೈನುಗಾರರು ಪಶು ಸಂಗೋಪನಾ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳು, ಕೆಎಂಎಫ್ ಸಿಬ್ಬಂದಿಗಳು ಅಥವಾ ಗ್ರಾಮ ಮಟ್ಟದಲ್ಲಿ ಪಶು ಸಖಿಯರು ಜಾನುವಾರುಗಳಿಗೆ ಲಸಿಕೆ ನೀಡಲು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಜಿಲ್ಲೆ, ರಾಜ್ಯ ಹಾಗೂ ದೇಶಾದ್ಯಂತ ನಡೆಯುತ್ತಿರುವ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗುವಂತೆ ಶುಭ ಹಾರೈಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಎಂ.ಸಿ.ರೆಡ್ಡಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಶಿವಯೋಗಿ ಬಿ., ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಂದೀಪ ಕುಮಾರ್, ಡಾ.ಉದಯಕುಮಾರ್ ಶೆಟ್ಟಿ ನೀಲಾವರ ಗೋಶಾಲೆಯ ಟ್ರಸ್ಟಿಗಳಾದ ಡಾ.ಸರ್ವೋತ್ತಮ ಉಡುಪ, ನಾಗರಾಜ ರಾವ್, ಕೆಎಂಎಫ್‌ನ ಸಹಾಯಕ ವ್ಯವಸ್ಥಾಪಕ ಡಾ.ನಿಜಾಮ್ ಪಟೇಲ್, ಬ್ರಹ್ಮಾವರ ತಾಲೂಕಿನ ಪಶುಪಾಲನಾ ಇಲಾಖೆಯ ಮತ್ತು ಕೆಎಂಎಫ್ ಅಧಿಕಾರಿಗಳು ಹಾಗೂ ಗೋವರ್ಧನ ಗಿರಿ ಟ್ರಸ್ಟ್‌ನ ಸದಸ್ಯರು, ಸಿಬ್ಬಂದಿಗಳು, ಪಶುಸಖಿಯರು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News