ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಅವಗಣನೆ: ಉಡುಪಿ ಕಾಂಗ್ರೆಸ್ ನಿಂದ ಚೊಂಬು ಹಿಡಿದು ಪ್ರತಿಭಟನೆ

Update: 2024-07-26 10:38 GMT

ಉಡುಪಿ, ಜು.26: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯವನ್ನು ಅವಗಣನೆ ಮಾಡಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಉಡುಪಿ ಬ್ರಹ್ಮಗಿರಿ ವೃತ್ತದಲ್ಲಿ ಕೈಯಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಡತನದಲ್ಲಿ ಭಾರತ ಇಂದು ಇಡೀ ಜಗತ್ತಿನಲ್ಲಿ 111ನೇ ಸ್ಥಾನದಲ್ಲಿದೆ. ದೇಶದಲ್ಲಿ ಇಂದು ನಿರುದ್ಯೋಗ ಶೇ.35ರಿಂದ ಶೇ.83ಕ್ಕೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಜೆಟ್ ನಲ್ಲಿ ಪ್ರತಿ ರಾಜ್ಯಗಳಿಗೂ ಶೇ.41ರಷ್ಟು ಅನುದಾನ ನೀಡಬೇಕಾಗಿದೆ. ಆದರೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಅನುದಾನ ನೀಡದೆ ಅನ್ಯಾಯ ಎಸಗಿದೆ ಎಂದರು.

 

ಅಧಿಕಾರದ ಕುರ್ಚಿಗಾಗಿ ಕೇಂದ್ರ ಸರಕಾರ ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. ಆದರೆ ಬೇರೆ ರಾಜ್ಯಗಳಿಗೆ ಅನುದಾನ ನೀಡದೆ ತಾರತಮ್ಯ ಎಸಗಿದೆ. ಇದಕ್ಕೆ ತಕ್ಕ ಉತ್ತರವನ್ನು ಅಧಿವೇಶನದಲ್ಲಿ ವಿರೋಧ ಪಕ್ಷದ ಸಮರ್ಥ ನಾಯಕ ರಾಹುಲ್ ಗಾಂಧಿ ನೀಡಿ, ಮೋದಿ ಸರಕಾರ ನೀತಿಯನ್ನು ಖಂಡಿಸಲಿದ್ದಾರೆ ಎಂದು ಅವರು ತಿಳಿಸಿದರು.

 

 

ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕೇಂದ್ರ ಸರಕಾರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನುದಾನ ನೀಡದೆ ಧ್ವೇಷದ ರಾಜಕಾರಣ ಮಾಡುತ್ತಿದೆ. ನಿರ್ಮಲಾ ಸೀತಾರಾಮನ್ ರಾಜ್ಯಸಭಾಕ್ಕೆ ತನ್ನನ್ನು ಆರಿಸಿ ಕಳುಹಿಸಿದ ಕರ್ನಾಟಕ ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಇದು ಭಾರತ ಎಂಬ ಒಕ್ಕೂಟ ವ್ಯವಸ್ಥೆಗೆ ಮಾಡಿರುವ ದ್ರೋಹ ಎಂದು ಟೀಕಿಸಿದರು.

 

ಕೆಪಿಸಿಸಿ ಉಪಾಧ್ಯಕ್ಷ ಎಂ.ಎ.ಗಪೂರ್, ಕಾಂಗ್ರೆಸ್ ಜಿಲ್ಲಾ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಅಮೃತ್ ಶೆಣೈ, ಅಣ್ಣಯ್ಯ ಶೇರಿಗಾರ್, ಎಂ.ಪಿ.ಮೊಯ್ದಿನಬ್ಬ, ಇಸ್ಮಾಯೀಲ್ ಆತ್ರಾಡಿ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಗೋಪಿ ನಾಯ್ಕ್, ದಿವಾಕರ್ ಕುಂದರ್, ಹರೀಶ್ ಕಿಣಿ, ಡಿ.ಆರ್.ರಾಜು ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಚೊಂಬು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಕಾಂಗ್ರೆಸ್ ಭವನದಿಂದ ಬ್ರಹ್ಮಗಿರಿ ವೃತ್ತದವರೆಗೆ ಮೆರವಣಿಗೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News