ಆ.18 ಅಥವಾ 20ಕ್ಕೆ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ: ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-08-05 15:18 GMT

ಉಡುಪಿ, ಆ.5: ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ನುಡಿದಂತೆ ನಡೆಯುವ ಪಕ್ಷ. ಅಧಿಕಾರಕ್ಕೆ ಬಂದಾಲೆಲ್ಲ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದ ಖ್ಯಾತಿ ಪಕ್ಷಕ್ಕಿದೆ. ಈ ಬಾರಿ ನೀಡಿದ ಐದು ಗ್ಯಾರಂಟಿಗಳಲ್ಲಿ ಶಕ್ತಿ ಹಾಗೂ ಅನ್ನಭಾಗ್ಯ ಈಗಾಗಲೇ ಜಾರಿಗೊಂಡಿದೆ. ಇಂದು ಗೃಹಜ್ಯೋತಿಗೆ ಚಾಲನೆ ದೊರಕಿದೆ. ಇದೇ ಆಗಸ್ಟ್ 18 ಅಥವಾ 20ರಂದು ಬೆಳಗಾವಿಯಲ್ಲಿ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಶನಿವಾರ ನಗರದ ಕುಂಜಿಬೆಟ್ಟುನಲ್ಲಿರುವ ಕ.ವಿ.ಪ್ರ.ನಿ.ನಿ ನೌಕರರ ಸಂಘದ ಸಭಾಭವನದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಗೃಹಜ್ಯೋತಿ ಯೋಜನೆಯಿಂದ ಉಡುಪಿ ಜಿಲ್ಲೆಯ 3,15,692 ಗ್ರಾಹಕರಿಗೆ ಪ್ರಯೋಜನ ದೊರೆಯಲಿದೆ. ಈ ಪೈಕಿ 2,69,949 ಮಂದಿ ಗ್ರಾಹಕರು ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೊಂದಾ ಯಿಸಿ ಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ನಾವು ನುಡಿದಂತೆ ನಡೆದಿದ್ದೇವೆ. ಬರೇ ಮೂರು ತಿಂಗಳಲ್ಲಿ ಮೂರನೇ ಗ್ಯಾರಂಟಿ ಇಂದು ಜಾರಿಗೊಂಡಿದೆ. ರಾಜ್ಯದಲ್ಲಿ ಎಲ್ಲಾ ಭಾಷೆ, ಜಾತಿ, ಧರ್ಮದವರ ಶ್ರೇಯೋಭಿವೃದ್ಧಿಗಾಗಿ ಚುನಾವಣೆಗೂ ಮುನ್ನ ಸರ್ಕಾರ ಘೋಷಿಸಿದ್ದ ಐದು ಯೋಜನೆ ಗಳಲ್ಲಿ ಮೂರು ಕೇವಲ ಮೂರು ತಿಂಗಳಲ್ಲಿ ಜಾರಿಯಾದಂತಾಗಿದೆ. ಸರ್ವರಿಗೂ ಸಮ ಪಾಲು ಸಮ ಬಾಳು ಎಂಬ ತತ್ವದಡಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ರಾಜ್ಯವನ್ನು ಪ್ರಗತಿಯುತ್ತ ಮುನ್ನೆಡೆಸುತ್ತಿದೆ ಎಂದರು.

ರಾಜ್ಯದ ಎಲ್ಲಾ ಭಾಷೆ, ಧರ್ಮದವರಿಗೂ ಈ ಯೋಜನೆಗಳು ದಕ್ಕಬೇಕು. ಅಂಬೇಡ್ಕರ್, ಗಾಂಧಿ, ಶಿವಾಜಿ, ಅಕ್ಕ ಮಹಾದೇವಿ ಅವರಂಥ ಮಹಾ ಪುರುಷರ ಹಾದಿಯಲ್ಲಿ ಸಾಗಬೇಕೆಂಬುದು ನಮ್ಮ ಸಂಕಲ್ಪ.ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ನಮ್ಮ ಸರಕಾರ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಜಾರಿಗೊಳಿಸುತ್ತಿದೆ ಎಂದು ನುಡದರು.

ರಾಜ್ಯದ 1.42 ಕೋಟಿ ಗ್ರಾಹಕರು ಗೃಹಜ್ಯೋತಿ, 1.28 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದು, ಶಕ್ತಿ ಯೋಜನೆಯಡಿ ಇದುವರೆಗೆ 37 ಕೋಟಿ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಕುಟುಂಬಗಳಿಗೆ ಡಿಬಿಟಿ ಮೂಲಕ ಪ್ರತೀ ತಿಂಗಳು ರೂ.2000 ನೀಡಲಿದ್ದು, ಇದಕ್ಕಾಗಿ ಇದುವರೆಗೆ 1 ಕೋಟಿ ಕುಟುಂಬಗಳ ಮಹಿಳೆಯರು ನೊಂದಣಿ ಮಾಡಿಕೊಂಡಿದ್ದಾರೆ. ನಮ್ಮ ಸರಕಾರದಿಂದ ರಾಜ್ಯ ಸುಭದ್ರ ಮತ್ತು ಪ್ರಗತಿಪಥ ದತ್ತ ಮುನ್ನಡೆಯಲಿದೆ ಎಂದರು.

ಇದೇ ವೇಳೆ ಸಚಿವರು ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಬಿಲ್‌ನ ದೃಢೀಕರಣ ಪತ್ರ ವಿತರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತ ನಾಡಿ ರಾಜ್ಯ ಸರಕಾರದ ಯೋಜನೆಗಳಿಂದ ಹಿಂದುಳಿದ ವರ್ಗಗಳ ಜನತೆಗೆ ಹೆಚ್ಚಿನ ಪ್ರಯೋಜನ ವಾಗುತ್ತಿದೆ. ಅವರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಇದರ ಲಾಭ ಪಡೆಯಬೇಕು ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಕೆಲವು ಬೇಡಿಕೆಗಳ ಕುರಿತು ಉಸ್ತುವಾರಿ ಸಚಿವರ ಗಮನ ಸೆಳೆದು ಈ ಬಗ್ಗೆ ಅವರು ಮುತುವರ್ಜಿ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಮೆಸ್ಕಾಂ ನಿರ್ದೇಶಕ ಹೆಚ್.ಜಿ. ರಮೇಶ್, ಮೆಸ್ಕಾಂನ ಮುಖ್ಯ ಇಂಜಿನಿಯರ್ ಪುಷ್ಪಾ, ಪ್ರಧಾನ ವ್ಯವಸ್ಥಾಪಕ ಅಭಿಷೇಕ್, ಉಡುಪಿ ವೃತ್ತದ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ಮತ್ತಿತರರು ಉಪಸ್ಥಿತರಿದ್ದರು.

ಮೆಸ್ಕಾಂ ಉಡುಪಿ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಸ್ವಾಗತಿಸಿದರು, ಲೆಕ್ಕಾಧಿಕಾರಿ ಗಿರೀಶ್ ನಿರೂಪಿಸಿದರು. ವಿನಯ ಕಾಮತ್ ವಂದಿಸಿದರು.






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News