ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸ್ವಾಮೀಜಿಗಳ ಕೆಲಸವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-11-30 15:04 GMT

ಮಣಿಪಾಲ: ಸಮಾಜದ ಸ್ವಾಸ್ಥ್ಯ ಕೆಡಿಸುವುದು ಸ್ವಾಮೀಜಿಗಳ ಕೆಲಸ ಅಲ್ಲ. ಸ್ವಾಮೀಜಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ನಾವೆಲ್ಲಾ ಭಾರತದಲ್ಲಿದ್ದೇವೆ ಅಂಬೇಡ್ಕರ್ ಅವರ ಸಂವಿಧಾನ ಇದೆ. ಈ ದೇಶದಲ್ಲಿ ರಾಷ್ಟ್ರಪತಿಯಿಂದ ಹಿಡಿದು ಜನಸಾಮಾನ್ಯರಿಗೂ ಒಂದೇ ಕಾನೂನು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೆಡಿಪಿ ಸಭೆಯ ಮಾಹಿತಿ ನೀಡಲು ಜಿಪಂ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಚೆಂದ್ರಶೇಖರನಾಥ ಸ್ವಾಮೀಜಿಗೆ ಬಿಜೆಪಿ ಬೆಂಬಲ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಅವರ ಉತ್ತರ ನೀಡುತಿದ್ದರು.

ಸ್ವಾಮೀಜಿಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಆದರೂ ಈ ದೇಶದಲ್ಲಿ ಸಂವಿಧಾನ ಎಂಬುದಿದೆಯಲ್ಲಾ? ಸಂವಿಧಾನ ದಿನದ ಬಗ್ಗೆ ನಾವು ನ.26ರಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದೇವಲ್ಲವೇ? ಸಂವಿಧಾನ ಎಲ್ಲರಿಗೂ ಅನ್ವಯಿಸಬೇಕಲ್ಲವೇ ಎಂದು ಪ್ರಶ್ನಿಸಿದರು.

ಮುಸ್ಲಿಮರಿಂದ ಮತದಾನದ ಹಕ್ಕನ್ನು ವಾಪಸ್ ಪಡೆಯಬೇಕು ಎಂದು ಚಂದ್ರಶೇಖರನಾಥ ಸ್ವಾಮೀಜಿ ನೀಡಿರುವ ಹೇಳಿಕೆಯ ಮಾದರಿಯಲ್ಲೆ ಬಿಜೆಪಿ ಯವರು ಹೇಳಿಕೆ ನೀಡಲಿ ಎಂದು ಸಚಿವೆ ಸವಾಲು ಹಾಕಿದರು. ಒಂದುಕಡೆ ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಬಿಜೆಪಿಯವರು ಸಹ ಹೇಳಿ ಬಿಡಲಿ ನೋಡೋಣ ಎಂದ ಅವರು ಸ್ವಾಮೀಜಿಗಳು ಇರುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡೋದಕ್ಕೆ ಹೊರತು ಹಾಳು ಮಾಡೋದಿಕ್ಕೆ ಅಲ್ಲ ಎಂದರು.

ಮಲೆಕುಡಿಯ, ಕೊರಗರ ಮನೆಗೆ ಗ್ಯಾರಂಟಿ: ಕೆಡಿಪಿ ಸಭೆಯಲ್ಲಿ ನಡೆದ ಕಲಾಪದ ವಿವರಗಳನ್ನು ನೀಡಿ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಪಶ್ಚಿಮ ಘಟ್ಟದ ಕಾಡುಗಳ ತಪ್ಪಲಲ್ಲಿ ವಾಸಿಸುವ ಮಲೆಕುಡಿಯ, ಕೊರಗ ಬುಡಕಟ್ಟು ಸಮುದಾಯದವರಿಗೆ ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮ ಗಳೂ ಸೇರಿದಂತೆ ಗ್ಯಾರಂಟಿ ಯೋಜನೆಗಳನ್ನು ಅವರ ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಕೆಲವರು ರೇಷನ್ ಕಾರ್ಡ್ ಹೊಂದಿಲ್ಲವೆಂಬ ಕಾರಣದಿಂದ ಪಡಿತರ ಹಾಗೂ ಗ್ಯಾರಂಟಿ ಯೋಜನೆಗಳು ಅವರನ್ನು ತಲುಪಿಲ್ಲ ಎಂಬ ಮಾಹಿತಿ ಇದೆ. ಅರ್ಹರಿರುವ ಪ್ರತಿಯೊಬ್ಬರಿಗೂ ಇವುಗಳನ್ನು ಅವರ ಮನೆಗೆ ಹೋಗಿ ತಲುಪಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಪ್ರಸ್ತುತ ಸಾಲಿನಲ್ಲಿ ವಾಡಿಕೆಗಿಂಡ ಶೇ.17ರಷ್ಟು ಹೆಚ್ಚು ಮಳೆಯಾಗಿದೆ. ಹೆಚ್ಚಿನ ಮಳೆಯಿಂದ ಬೆಳೆಹಾನಿ, ಮೂಲಭೂತ ಸೌಕರ್ಯಗಳಾದ ರಸ್ತೆ, ಸರ್ಕಾರಿ ಕಟ್ಟಡಗಳು, ಸೇತುವೆ ಸೇರಿದಂತೆ ಆಸ್ತಿಪಾಸ್ತಿಗಳಿಗೆ ಹಾನಿವುಂಟಾಗಿದೆ. ಈ ಸಂಬಂಧ ಈಗಾಗಲೇ ಬೆಳೆಹಾನಿ, ಮಾನವನಹಾನಿಗೆ ಸೇರಿದಂತೆ ವಿವಿಧ ಹಾನಿಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದರು.

ಮೂಲಭೂತ ಸೌಕರ್ಯಗಳ ಹಾನಿಗಳ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಕೃತಿ ವಿಕೋಪ ಅನುದಾನದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಅನುದಾನದ ಕೊರತೆ ಇದೆ. ಬೆಳಗಾವಿ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಜಿಲ್ಲೆಯ ಶಾಸಕರ ಸಹಿತ ನಿಯೋಗದೊಂದಿಗೆ ಮುಖ್ಯಮಂತ್ರಿ ಗಳ ಬಳಿ ಹೋಗಿ ಜಿಲ್ಲೆಗೆ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ವರಾಹಿ ಯೋಜನೆ ಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ ಗೊಳಿಸಲು ಸೂಚಿಸಲಾಗಿದೆ. ವರಾಹಿ ನೀರಾವರಿ ಯೋಜನೆಗೆ 9 ಕಿ.ಮೀ.ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಪೂರ್ವನುಮತಿ ಈಗಾಗಲೇ ನೀಡಲಾಗಿದ್ದು, ಕೆಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು. ಇದರಿಂದ 2700 ಹೆಕ್ಟೇರ್ ನೀರಾವರಿ ಪ್ರದೇಶಗಳಿಗೆ ಅನುಕೂಲ ವಾಗಲಿದೆ ಎಂದರು.

ಬಡ ಜನರಿಗೆ 94ಸಿ ಹಾಗೂ 53, 54ರಲ್ಲಿ ಜಾಗ ಕೋರಿ ಸಲ್ಲಿಸಿದ ಅರ್ಜಿಗಳಲ್ಲಿ ಸಾವಿರಾರು ಅರ್ಜಿಗಳನ್ನು ಅನರ್ಹಗೊ ಳಿಸಲಾಗಿವೆ ಎಂದು ಶಾಸಕರಿಂದ ದೂರು ಕೇಳಿ ಬಂದಿದೆ. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರದೇ ಇರುವ ಪ್ರದೇಶದ ಜಾಗವನ್ನು ಸರ್ವೇ ಮಾಡಿ, ಸೂಕ್ತ ಭೂಮಿಯನ್ನು ಗುರುತಿಸಿ, ಅರ್ಹರಿಗೆ ಹಕ್ಕು ಪತ್ರಗಳನ್ನು ನೀಡುವಂತೆ ನೋಡಿಕೊ ಳ್ಳಬೇಕು. ಈಗಾಗಲೇ ತಾಲೂಕು ಮಟ್ಟದ ಸಮಿತಿಗಳು, ಆಯ್ಕೆ ಮಾಡಿರುವ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.

ಜಿಲ್ಲೆಯ ಜನ ಸಾಮಾನ್ಯರಿಗೆ ಮನೆಕಟ್ಟಲು ಸರಳವಾಗಿ ಮರಳು ಲಭ್ಯವಾಗುವಂತೆ ಅಧಿಕಾರಿಗಳು ಕ್ರಮತೆಗೆದುಕೊಳ್ಳಲು ತಿಳಿಸಲಾಗಿದೆ. ಮನೆಕಟ್ಟಲು ಅಗತ್ಯವಿರುವ ಕೆಂಪು ಕಲ್ಲು ಗಣಿಗಾರಿಕೆಗೆ ಅಧಿಕಾರಿಗಳು ಜಿಲ್ಲೆಯಲ್ಲಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ಅಧಿಕಾರಿ ಗಳು ಕೆಂಪು ಕಲ್ಲುಗಳನ್ನು ತೆಗೆಯಲು ನಿಯಮಾನುಸಾರ ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News