ಸಂಸ್ಕೃತಿ, ವೇಷಭೂಷಣಕ್ಕೆ ಬೆಲೆ ಕೊಡುವ ಸರಕಾರ ಆಯ್ಕೆ ನಮ್ಮ ಜವಾಬ್ದಾರಿ: ಪೇಜಾವರ ಶ್ರೀ

Update: 2023-10-10 15:37 GMT

ಉಡುಪಿ, ಅ.10: ‘ನಮ್ಮ ದೇಶವನ್ನು ಭಾರತ ಎನ್ನಲು ನಾಚಿಕೆ ಹೇಸಿಗೆ ಪಡುವವರರು ಇದ್ದಾರೆ. ದೇಶ ವಿರೋಧಿಗಳು ಒಟ್ಟಾಗುತ್ತಾರೆ ಎಂದರೆ ನಾವೂ ಒಂದಾಗಬೇಕು. ನಮ್ಮ ಸಂಸ್ಕೃತಿ, ದೇಶ, ವೇಷಭೂಷಣಕ್ಕೆ ಬೆಲೆ ಕೊಡುವ ಸರಕಾರ ವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ 60ನೇ ವರ್ಷಾಚರಣೆಯ ಪ್ರಯುಕ್ತ ಬಜರಂಗ ದಳದ ನೇತೃತ್ವದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಮತ್ತು ಹಿಂದೂ ಸಮಾಜೋತ್ಸವದಲ್ಲಿ ಅವರು ಮಾತನಾಡುತಿದ್ದರು.

ನಾವು ಹಿಂದೂಗಳು ಶಾಂತಿ ಪ್ರೀಯರು. ಧರ್ಮದ ಪ್ರತೀಕ ಶ್ರೀರಾಮ ಚಂದ್ರನೇ ನಮಗೆ ಆದರ್ಶ. ನಾವು ಕಲ್ಲು ಎಸೆಯು ವುದಿಲ್ಲ, ಕೊಳ್ಳಿ ಇಡಲ್ಲ ಮತ್ತು ಯಾರ ತಲೆಯೂ ಒಡೆಯುವುದಿಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ. ಬಿರುಗಾಳಿ ಬೀಸಿದರೆ ಎದೆಯೊಡ್ಡಿ ನಿಲ್ಲಲೂ ನಾವು ಸಿದ್ಧ ಎಂದರು.

ಮಧ್ಯಪ್ರದೇಶ ಬೋಪಾಲ್‌ನ ಮಹಾಮಂಡಲೇಶ್ವರ ಅಖೀಲೇಶ್ ದಾಸ್ ಗಿರಿ ಮಹಾರಾಜ್ ಮಾತನಾಡಿ, ನಮ್ಮ ಸಂಘಟನೆ ಹಾಗೂ ಸಂಘರ್ಷದಲ್ಲಿ ಶಕ್ತಿ ಇದೆ. ಇದು ಸಂಘರ್ಷದ ಸಂಘಟನೆ ಯುಗ. ವ್ಯಾಪಾರಕ್ಕಾಗಿ ಬಂದ ಬಿಳಿ ವರ್ಣಿಯರು ದೇಶದ ಒಗ್ಗಟ್ಟನ್ನು ಒಡೆದರು. ನಮ್ಮ ದೇಶದಲ್ಲಿ ಯುವಜನರನ್ನು ಎಚ್ಚರಿಸುವ ಕೆಲಸವನ್ನು ಇಂದು ಮಾಡಲಾ ಗುತ್ತಿದೆ. ಸ್ವತಂತ್ರ ಭಾರತದ ಹಿಂದುಗಳಾದ ನಾವು ಮಲಗಿಲ್ಲ, ಎಚ್ಚೆತ್ತುಕೊಂಡಿದ್ದೇವೆ ಎಂದು ತಿಳಿಸಿದರು.

ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಆರ್‌ಎಸ್‌ಎಸ್ ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್, ಮುಖಂಡರಾದ ಸುನೀಲ್ ಕೆ.ಆರ್. ಮಾತನಾಡಿದರು. ಅಧ್ಯಕ್ಷತೆಯನ್ನು ಉದ್ಯಮಿ ಮನೋಹರ್ ಶೆಟ್ಟಿ ವಹಿಸಿದ್ದರು. ಎಂ.ಬಿ.ಪುರಾಣಿಕ್, ಸೂರ್ಯನಾರಾಯಣ, ಮಹಾಬಲೇಶ್ವರ ಹೆಗಡೆ, ಗಣೇಶ್ ಹೆಗ್ಡೆ ಪುಣ್ಚೂರು, ಹರಿಯಪ್ಪಕೋಟ್ಯಾನ್, ಡಾ.ರವೀಂದ್ರ ಶೆಟ್ಟಿ ಬಜಗೋಳಿ, ಕಡ್ತಲ ವಿಶ್ವನಾಥ ಪೂಜಾರಿ, ರಮೇಶ ಬಂಗೇರ, ವಿಷ್ಣು ಮೂರ್ತಿ ಆಚಾರ್ಯ, ಚೇತನ ಪೇರಲ್ಕೆ, ಉಪಸ್ಥಿತರಿದ್ದರು.

ದಿನೇಶ್ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮ ಸುರೇಶ್ ವಂದಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News