ಸೈನಿಕರಂತೆಯೇ ಹುತಾತ್ಮ ಪೊಲೀಸರಿಗೂ ಗೌರವ ಅಗತ್ಯ: ನ್ಯಾ.ಶಾಂತವೀರ

Update: 2023-10-21 12:55 GMT

ಉಡುಪಿ, ಅ.21: ಗಡಿ ಕಾಯುವ ಹುತಾತ್ಮ ಸೈನಿಕರಷ್ಟೇ ಗೌರವವನ್ನು ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುವ ವೇಳೆ ಹುತಾತ್ಮರಾಗುವ ಪೊಲೀಸರಿಗೂ ಸಲ್ಲಬೇಕು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾ ಧೀಶ ಶಾಂತವೀರ ಶಿವಪ್ಪಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಉಡುಪಿ ಚಂದು ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಗಡಿ ಕಾಯುವ ಸೈನಿಕರು ಮರಣ ಹೊಂದಿದಾಗ ಅವರ ಬಗ್ಗೆ ಜನರು ಹೆಚ್ಚು ಮಾತನಾಡುತ್ತಾರೆ. ಆದರೆ ಶಾಂತಿ ಕಾಪಾಡು ವಾಗ ಜನರ ರಕ್ಷಣೆ ಮಾಡುವಾಗ ಮರಣ ಹೊಂದಿದ ಪೊಲೀಸ್ ಸಿಬಂದಿಗಳ ಕರ್ತವ್ಯದ ಬಗ್ಗೆ ಜನರು ಮಾತನಾಡುವುದು ಕಡಿಮೆ. ಕೇವಲ ಒಂದು ದಿನದ ಬೇಸರವನ್ನು ವ್ಯಕ್ತಪಡಿಸಿ ಮತ್ತೆ ಅದನ್ನು ಮರೆತು ಬಿಡುತ್ತೇವೆ ಎಂದರು.

ಜನರು ಕಾನೂನು ಪಾಲನೆ ಮಾಡುವುದನ್ನು ಮರೆಯದೆ ಪೊಲೀಸರಿಗೆ ಅವರ ಕರ್ತವ್ಯ ನಿರ್ವಹಣೆಯಲ್ಲಿ ಸಹಕಾರ ನೀಡ ಬೇಕು. ಮೊದಲಿಗಿಂತ ಈಗಿನ ಪೊಲೀಸ್ ವ್ಯವಸ್ಥೆ ಸುಧಾರಿಸಿದ್ದು, ಇದರಿಂದ ಪೊಲೀಸರಿಗೆ ಹೆಚ್ಚಿನ ಅನುಕೂಲ ವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಮಾತನಾಡಿ, 1959ರ ಅ.21ರಂದು ಚೀನಾ-ಭಾರತ ಗಡಿ ಭಾಗದಲ್ಲಿ ಹೋರಾಡಿ ಪ್ರಾಣ ತೆತ್ತ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆ ಪ್ರತೀಕವಾಗಿ ಪ್ರತಿ ವರ್ಷ ಅ.21ರಂದು ದೇಶಾದ್ಯಂತ ಎಲ್ಲ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ. ಈ ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು 189 ಪೊಲೀಸರು ಸೇವೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವರಲ್ಲಿ ಕರ್ನಾಟಕದ 16 ಧೀರ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ ಎಂದರು.

ಜಿಲ್ಲಾ ಪೋಲಿಸ್ ಇಲಾಖೆ, ಸಾರ್ವಜನಿಕರು ಪರವಾಗಿ ಹುತಾತ್ಮರಾದ ಪೊಲೀಸ್ ಸಿಬಂದಿಗಳಿಗೆ ಗೌರವ ನಮನ ಸಲ್ಲಿಸ ಲಾಯಿತು. ಹುತಾತ್ಮ ಪೊಲೀಸರಿಗೆ ಗೌರವ ಸೂಚಕವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಸಿಐಡಿ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಉದಯ್ ಎಂ.ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News