ಮಳೆ ಕೊರತೆ; ಕುಡಿಯುವ ನೀರಿನ ಮಿತಬಳಕೆಗೆ ಸೂಚನೆ: ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

Update: 2023-10-26 14:51 GMT

ಉಡುಪಿ, ಅ.26: ಈ ಸಲದ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ (ಜೂನ್-ಸೆಪ್ಟಂಬರ್) ಜಿಲ್ಲೆಯಲ್ಲಿ ಶೇ.22ರಷ್ಟು ಮಳೆಯ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂದೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ನೀರಿನ ಮಿತ ಬಳಕೆಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಜನವರಿಯಿಂದ ಸೆಪ್ಟಂಬರ್‌ವರೆಗೆ ಜಿಲ್ಲೆಯಲ್ಲಿ ಶೇ.24ರಷ್ಟು ಮಳೆಯ ಕೊರತೆ ಕಂಡಬಂದಿದೆ. ಅಲ್ಲದೇ ಹಿಂಗಾರು ಮಳೆ ಸುರಿಯುವ ಅಕ್ಟೋಬರ್ ತಿಂಗಳಲ್ಲೂ ಇದುವರೆಗೆ ಶೇ.37ರಷ್ಟು ಕೊರತೆ ಕಂಡುಬಂದಿದೆ. ಹೀಗಾಗಿ ಕುಡಿಯುವ ನೀರಿಗೆ ಕೊರತೆಯಾಗುವುದನ್ನು ತಪ್ಪಿಸಲು ಈಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟಿನ ನೀರು ಹೊರಹರಿದು ಹೋಗದಂತೆ ಡಿಸೆಂಬರ್ ತಿಂಗಳ ಬದಲು ಈಗಲೇ ಹಲಗೆ ಹಾಕಿ ನೀರಿನ ಹರಿವು ತಡೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ತಿಂಗಳಲ್ಲಿ ಮಳೆ ಬರುವ ಮುನ್ಸೂಚನೆ ಇದ್ದಿದ್ದರಿಂದ ಇದುವರೆಗೆ ಹಲಗೆ ಹಾಕಿಲ್ಲ. ಆದರೆ ಜಿಲ್ಲೆಯಲ್ಲಿ ಈ ತಿಂಗಳು ನಿರೀಕ್ಷೆ ಮಳೆಯಾಗದ ಕಾರಣ ಶೀಘ್ರವೇ ಹಲಗೆ ಹಾಕುವಂತೆ, ಹಲಗೆ ಎತ್ತರ ಹೆಚ್ಚಿಸಲು ಸೂಚನೆ ನೀಡಲಾಗುವುದು ಎಂದರು.

ಉಡುಪಿಗೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯಲು ಒಂದೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈಗ ತುಂಬ ನೀರಿರುವುದರಿಂದ ನವೆಂಬರ್ ತಿಂಗಳ ಕೊನೆಯ ವೇಳೆಗೆ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರಾಹಿ ನೀರು ಫೆಬ್ರವರಿಗೆ: ವಾರಾಹಿಯಿಂದ ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ತರುವ ಕಾಮಗಾರಿಗೆ ವೇಗ ನೀಡಲಾಗುವುದು. ನೀರಾವರಿ ನಿಗಮದ ಆಡಳಿತ ನಿರ್ದೇಶಕರು ಕೆಲ ದಿನಗಳ ಹಿಂದೆ ಈ ಕಾಮಗಾರಿಯ ಗುತ್ತಿಗೆ ದಾರರೊಂದಿಗೆ ಸಭೆ ನಡೆಸಿದ್ದು, ಮುಂದಿನ ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದರು.

ಜಲಜೀವನ್ ಮಿಷನ್ ಕಾಮಗಾರಿಯನ್ನೂ ನಿಗದಿತ ಅವಧಿಯೊಳಗೆ ಮುಗಿಸಿ ನೀರು ಒದಗಿಸುವಂತೆ ಸಂಬಂಧಿತರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜ್ಯೋತ್ಸವ ಸನ್ಮಾನಕ್ಕೆ 110+ ಅರ್ಜಿ

ಪ್ರತಿ ವರ್ಷ ನವೆಂಬರ್ 1ರ ರಾಜ್ಯೋತ್ಸವ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ನೀಡಲಾಗುವ ರಾಜ್ಯೋತ್ಸವ ಸನ್ಮಾನಕ್ಕೆ ಕಳೆದ ಬಾರಿಯಂತೆ ಈ ಬಾರಿಯೂ 30 ಮಂದಿಯನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.

ಇದಕ್ಕಾಗಿ ಎಡಿಸಿ ನೇತೃತ್ವದ ಆಯ್ಕೆ ಸಮಿತಿ ಒಂದೆರಡು ದಿನಗಳಲ್ಲಿ ಸಭೆ ಸೇರಿ ಸನ್ಮಾನಿತರ ಪಟ್ಟಿಯನ್ನು ಅಂತಿಮಗೊಳಿ ಸಲಿದೆ. ಈ ಬಾರಿಯ ಪ್ರಶಸ್ತಿಗಾಗಿ ನಿನ್ನೆಯವರೆಗೆ 110 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಎಂದರು.

ಪ್ರಶಸ್ತಿಯ ಗೌರವ ಕಾಪಾಡಲು 10 ಮಂದಿಯನ್ನು ಸನ್ಮಾನಕ್ಕೆ ಆಯ್ಕೆ ಮಾಡುವ ಇರಾದೆ ಇತ್ತಾದರೂ, ಕಳೆದ ಬಾರಿ ಯಂತೆ ಈ ಸಲವೂ 30 ಮಂದಿಯನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು ಎಂದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News