ವಕ್ಫ್ ವಿಚಾರದಲ್ಲಿ ಸಾಮರಸ್ಯ ಹದಗೆಡಿಸುವ ಹುನ್ನಾರ, ವಿಕೃತ ಮನಸ್ಥಿತಿ ವಿರುದ್ಧ ಕಾನೂನು ಕ್ರಮ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

Update: 2024-11-05 11:52 GMT

ಉಡುಪಿ: ವಕ್ಫ್ ವಿಚಾರದಲ್ಲಿ ವಿಲಕ್ಷಣ ಸಿದ್ಧಾಂತವನ್ನು ಮಂಡಿಸಿ, ಹಿಂದೂ ಮುಸ್ಲಿಮರ ನಡುವೆ ವೈಮನಸ್ಸು ಮೂಡಿಸಿ, ನಾಡಿನ ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಹದಗೆಡಿಸುವ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿದೆ. ವಕ್ಫ್ ವಿಚಾರ ವಾಗಿ ಮುಸ್ಲಿಮ್ ಸಮುದಾಯದ ವಿರುದ್ಧ ಅನಗತ್ಯ ವಿಶ್ಲೇಷಣೆ, ವಿಕೃತ ಮನಸ್ಥಿತಿ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಆಗ್ರಹಿಸಿದ್ದಾರೆ.

ಉಡುಪಿ ಜಾಮೀಯ ಮಸೀದಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ಇಡೀ ದೇಶ ಗೊಂದಲದ ಗೂಡಾಗಿದೆ. ಆದುದರಿಂದ ಕೇಂದ್ರ ಸರಕಾರ ವಿಭಜಕ ಮನಸ್ಥಿತಿ ಹಾಗೂ ಪ್ರಜಾಪೀಡನೆ ಚಾಳಿಯನ್ನು ತೊರೆದು, ರಾಜ ಧರ್ಮ ಪಾಲನೆ ಮಾಡಬೇಕು. ಸಾಮರಸ್ಯಭರಿತ ಸಮಾಜ ನಿರ್ಮಾಣದಲ್ಲಿ ಬದ್ಧತೆಯನ್ನು ಮತ್ತು ಪ್ರಜಾಪಾಲನೆಯಲ್ಲಿ ರಾಜಧರ್ಮ ಪಾಲಿಸಬೇಕು. ನಾಡಿನ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.

ಅಧಿಕೃತ ದಾಖಲೆಗಳಿರುವ ಭಾರತದ ವಕ್ಫ್ ಆಸ್ತಿಯ ಪ್ರಮಾಣ 9 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿದೆ. ಹೆಚ್ಚು ಇರಬೇಕಾಗಿದ್ದ ಭೂಮಿಯನ್ನು ಬಹುತೇಕ ನುಂಗಿದ್ದು ಮುಸ್ಲಿಮರೇ ಹೊರತು ಹಿಂದೂಗಳಲ್ಲ. ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆ ಮತ್ತು ಅಸಡ್ಡೆಗೆ ಮುಸ್ಲಿಂ ಸಮುದಾಯವೇ ಹೊಣೆ. ಯಾವುದೇ ವಕ್ಫ್ ಆಸ್ತಿಯೂ ಅಕ್ರಮವಾಗಿ ನೊಂದಾವಣೆಯಾಗಿಲ್ಲ. ಮುಸ್ಲಿಮರ ಧಾರ್ಮಿಕ ನಿಯಮದ ಪ್ರಕಾರ ಆಸ್ತಿಯ ಮೇಲೆ ಮಾಲಕತ್ವ ಹೊಂದದಿದ್ದಲ್ಲಿ ಆಸ್ತಿಯನ್ನು ಮಸೀದಿ ಅಥವಾ ಮದ್ರಸಗಳಿಗೆ ವಕ್ಫ್ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಅವರು ಸ್ಪಷ್ಟನೆ ನೀಡಿದರು.

ವೇದಿಕೆ ಮಾಜಿ ಅಧ್ಯಕ್ಷ ಹಾಗೂ ವಕೀಲ ಅನೀಸ್ ಪಾಶಾ ಮಾತನಾಡಿ, ಸಂವಿಧಾನ ಅಡಿಯಲ್ಲಿ ವಕ್ಫ್ ಕಾಯಿದೆಯಡಿ ವಕ್ಫ್ ಟ್ರಿಬ್ಯುನಲ್ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಎಲ್ಲ ಸಮುದಾಯದ ನ್ಯಾಯಾಧೀಶರು ಕೂಡ ಇದ್ದಾರೆ. 1965ರ ನೋಟೀಫಿಕೇಶನ್ ಪ್ರಕಾರ ಎಲ್ಲ ವಕ್ಫ್ ಆಸ್ತಿಗಳನ್ನು ರಾಜ್ಯ ಸರಕಾರ ಪಟ್ಟಿ ಮಾಡಿ ಗಜೆಟ್ ನೋಟೀಫಿಕೇಶನ್ ಮಾಡುತ್ತಿ ದ್ದರೆ ಈಗಿನ ಯಾವುದೇ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಆಗಿನ ಅಧಿಕಾರಿಗಳ ಬೇಜವಾಬ್ಧಾರಿಗಳೇ ಇದಕ್ಕೆ ಕಾರಣ. ಬಹಳಷ್ಟು ಆಸ್ತಿಗಳು ಗಜೆಟ್‌ನಲ್ಲಿ ವಕ್ಫ್ ಎಂಬುದಿದ್ದರೂ, ಸ್ವಾಧೀನ ಅನುಭವದಲ್ಲಿ ಬೆರೆಯವರು ಇದ್ದಾರೆ. ಹಾಗಾಗಿ ನಿರಂತರ ಗೊಂದಲ ಆಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ, ನಿವೃತ್ತ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮರೂರ್, ಕಾರ್ಯದರ್ಶಿ ಡಾ.ಹಕೀಮ್ ತೀರ್ಥಹಳ್ಳಿ, ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ನಝೀರ್ ಬೆಳುವಾಯಿ, ಮುಬಾರಕ್ ಗುಲ್ವಾಡಿ, ಜಮೀರ್ ಅಹ್ಮದ್ ರಶದಿ, ಮುಜಾಫರ್ ಹುಸೈನ್, ಜಿಯಾವುಲ್ಲಾ ಖಾನ್, ಮೌಲಾನ ಅಬ್ದುಲ್ ಹಫೀಝ್ ಕಾರ್ಕಳ ಉಪಸ್ಥಿತರಿದ್ದರು.

‘ಚುನಾವಣೆಯಿಂದ ವಕ್ಫ್ ವಿಚಾರ ಮುನ್ನೆಲೆಗೆ’

2019ರಿಂದ 23ರವರೆಗೆ ರಾಜ್ಯ ಬಿಜೆಪಿ ಸರಕಾರ ವಕ್ಫ್ ಸಂಬಂಧ ಈಗಿನ ಸರಕಾರಕ್ಕಿಂತ 15 ಪಟ್ಟು ಹೆಚ್ಚು ನೋಟೀಸನ್ನು ಜಾರಿ ಮಾಡಿದೆ. 1984ರ ರಾಮಕೃಷ್ಣ ಹೆಗಡೆ ಸೇರಿದಂತೆ ಎಲ್ಲ ಸರಕಾರಗಳು ಈ ರೀತಿಯ ನೋಟೀಸ್ ನೀಡಿದೆ.1998ರ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ನೋಟೀಸ್ ನೀಡುವ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯುತ್ತಿದೆ ಎಂದು ವಕ್ತಾರ ಮುಷ್ತಾಕ್ ಹೆನ್ನಾಬೈಲ್ ತಿಳಿಸಿದರು.

ಸರಕಾರ ನೋಟೀಸ್ ಜಾರಿ ಮಾಡಿರುವ ಪೈಕಿ ಮುಸ್ಲಿಮ್ ರೈತರು ಕೂಡ ಇದ್ದಾರೆ. ಕರ್ನಾಟಕದಲ್ಲಿ ಉಪ ಚುನಾವಣೆ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ವಿಧಾನ ಸಭಾ ಚುನವಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದ ಆಸ್ತಿಯನ್ನು ಮುಸ್ಲಿಮರು ಕಬಳಿಸುತ್ತಿದ್ದಾರೆಂಬ ಆತಂಕ ಸೃಷಿಸುವ ಕಾರ್ಯ ಮಾಡಲಾಗುತ್ತಿದೆ. ಅದೇ ಕಾರಣಕ್ಕೆ ಈ ನೋಟೀಸ್ ವಿಚಾರ ಇದೀಗ ಮುನ್ನಲೆಗೆ ಬಂದಿದೆ ಎಂದರು.

‘ಭೂಮಿ ದಾನ ಮಾಡಲು ಹಿಂದೇಟು ಸಾಧ್ಯತೆ’

ವಕ್ಫ್ ಆಸ್ತಿಗಳಲ್ಲಿ ಶೇ.95ರಷ್ಟು ದಾನ ಮಾಡಿರುವ ಆಸ್ತಿಯೇ ಇದೆ. ಮುಸ್ಲಿಮರು ಸ್ವತಃ ದುಡಿದು ಧರ್ಮದ ಕಾರ್ಯಕ್ಕಾಗಿ ದಾನ ಮಾಡಿದ ಆಸ್ತಿಗಳು ಇದಾಗಿವೆ. ಒಂದು ವೇಳೆ ಕೇಂದ್ರ ಸರಾಕರ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ಜಾರಿ ಮಾಡಿ ದರೆ ಮುಂದೆ ಮುಸ್ಲಿಮರು ತಮ್ಮ ಭೂಮಿಯನ್ನು ದಾನ ಮಾಡಲು ಹಿಂದೇಟು ಹಾಕುವ ಸಾಧ್ಯತೆ ಇದೆ. ದಾನ ಮಾಡಿದ ಭೂಮಿಯನ್ನು ಸರಕಾರ ಮುಸ್ಲಿಮರ ಹಾಗೂ ಇಸ್ಲಾಮ್ ಧರ್ಮದ ಕಾರ್ಯಗಳಿಗೆ ಬಳಸಲ್ಲ ಎಂಬ ಆತಂಕ ಮುಸ್ಲಿಮರನ್ನು ಕಾಡುತ್ತಿದೆ ಎಂದು ವಕೀಲ ಅನೀಸ್ ಪಾಶಾ ತಿಳಿಸಿದರು.

ಯಾವುದೇ ತಿದ್ದುಪಡಿ ಮಾಡದೆ ಕೇವಲ ನೋಟೀಸ್ ಜಾರಿ ಮಾಡಿರುವುದಕ್ಕೆ ಇಡೀ ರಾಜ್ಯದಲ್ಲಿ ಗೊಂದಲ ಸೃಷ್ಠಿಸಲಾಗು ತ್ತಿದೆ. ಇಲ್ಲಿ ಗಜೆಟ್ ನೋಟೀಫಿಕೇಶನ್ ಹೊರತು ಪಡಿಸಿ ಯಾವುದೇ ಭೂಮಿಯನ್ನು ವಶಪಡಿಸಿಕೊಳ್ಳುವುದಿಲ್ಲ. ಸದ್ಯ ಈಗ ಕೇಳಿ ಬರುತ್ತಿರುವ ಆರೋಪಗಳು ನೂರಕ್ಕೆ ನೂರು ಸುಳ್ಳು. ಅದನ್ನು ನಮ್ಮ ಸಂವಿಧಾನ, ವಕ್ಫ್ ಕಾಯಿದೆ ಕೂಡ ಹೇಳುವು ದಿಲ್ಲ. ಯಾರಿಗೂ ಅನ್ಯಾಯ ಮಾಡಲು ಈ ಕಾಯಿದೆ ಅವಕಾಶ ನೀಡುವುದಿಲ್ಲ. ಇದರ ಹೆಸರಿನಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದರು.

‘ಭಾರತದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಚರಾಸ್ತಿಯ ಮೌಲ್ಯವು ಮುಸ್ಲಿಮರ ವಕ್ಫ್ ಭೂಮಿಗಿಂತ ಸಾಕಷ್ಟು ಪಟ್ಟು ಹೆಚ್ಚಿದೆ. ಆದರೆ ಕೇಂದ್ರ ಸರಕಾರ ಕಾನೂನು ರೂಪಿಸಿ ವಕ್ಫ್ ಆಸ್ತಿಯನ್ನು ಕೊಳ್ಳೆ ಹೊಡೆಯಲು ಹವಣಿಸುತ್ತಿದೆ. ಭಾರತದಲ್ಲಿ ಎಲ್ಲ ಧರ್ಮದವರ ಧಾರ್ಮಿಕ ಕೇಂದ್ರಗಳಲ್ಲಿಯೂ ಹೇರಳವಾದ ಆಸ್ತಿಗಳಿದ್ದರೂ ಕೇವಲ ಮುಸ್ಲಿಮರ ಆಸ್ತಿಯನ್ನು ಮಾತ್ರ ಲಪಟಾಯಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ’

-ಮುಷ್ತಾಕ್ ಹೆನ್ನಾಬೈಲ್, ವಕ್ತಾರರು

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News