ಅಂಬೇಡ್ಕರ್ ಸಾಧನೆಯ ಹಿಂದಿನ ಪರಿಶ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2023-08-14 15:13 GMT

ಮಣಿಪಾಲ, ಆ.14: ದೇಶ ನಾಳೆ ತನ್ನ 77ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಸೇರಿದಂತೆ ನಮ್ಮ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಸಾಧನೆಯ ಹಿಂದಿನ ಪರಿಶ್ರಮ ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಎಲ್ಲಾ ಮಹಾತ್ಮರ ಬದುಕು ನಿಮಗೆ ಆದರ್ಶವಾಗಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಸೋಮವಾರ ನಡೆದ ಉಡುಪಿ ಜಿಲ್ಲಾ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನೀಡಲಾಗುವ ಸಿಇಟಿ/ಜೆಇಇ/ಎನ್‌ಇಇಟಿ ಆನ್‌ಲೈನ್ ತರಬೇತಿಗೆ ಚಾಲನೆ ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾ ನುಡಿಗಳನ್ನಾಡಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಸಿಇಒ ಎಚ್.ಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಉಪ ವಿಭಾಗಧಿಕಾರಿ ರಶ್ಮಿ ಉಪಸ್ಥಿತರಿದ್ದರು.

ನನಗೆ ವೈದ್ಯಳಾಗಬೇಕೆಂಬ ಕನಸಿತ್ತು. ಆದರೆ ಕೌಟುಂಬಿಕ ಕಾರಣಗಳಿಗಾಗಿ ಅದು ಸಾಧ್ಯವಾಗಲಿಲ್ಲ. ಈಗ ವೈದ್ಯೆಯಾದ ಸೊಸೆಯ ಮೂಲಕ ಕುಟುಂಬದಲ್ಲಿ ಈ ಕೊರತೆ ತುಂಬಿಕೊಂಡಿದ್ದೇನೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ನೀವೂ ನಿಮ್ಮ ತಂದೆ-ತಾಯಿಯರ ಕನಸನ್ನು ನನಸು ಮಾಡಲು ಪರಿಶ್ರಮ ಪಡಬೇಕು ಎಂದರು.

ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಅಕ್ಕಮಹಾದೇವಿಯಂಥ ದೊಡ್ಡ ದೊಡ್ಡ ವ್ಯಕ್ತಿಗಳು ರಾತ್ರೋರಾತ್ರಿ ದೊಡ್ಡವರಾಗಿಲ್ಲ. ಅವರ ಪರಿಶ್ರಮದಿಂದಲೇ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾದರು. ಅವರ ಜೀವನ ನಿಮಗೆ ಸಾಧನೆಗೆ ಪ್ರೇರಣೆಯಾಗಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಆನ್‌ಲೈನ್ ವ್ಯವಸ್ಥೆ ಸೇರಿದಂತೆ ಎಲ್ಲಾ ಅನುಕೂಲಗಳಿವೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರಿಗೆ ಓದುವುದಕ್ಕೂ ಸೂಕ್ತ ಸ್ಥಳವಿರಲಿಲ್ಲ. ಬೀದಿ ದೀಪದ ಕೆಳಗೆ ಕುಳಿತು ಓದಿ, ದೊಡ್ಡ ವ್ಯಕ್ತಿ ಯಾದರು. ಅವರ ಬದುಕಿನ ಪ್ರೇರಣೆಯೊಂದಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಂಡು ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ ಎಂದರು.

ಉಡುಪಿ ಜಿಲ್ಲಾ ಪಂಚಾಯತ್ ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿರುವ ಈ ಉಚಿತ ಆನ್‌ಲೈನ್ ತರಬೇತಿಯ ಸೇವೆಯನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಅವರು ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಸಿಇಒ ಎಚ್.ಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಉಪ ವಿಭಾಗಾಧಿಕಾರಿ ರಶ್ಮಿ ಮುಂತಾದವರು ಉಪಸ್ಥಿತರಿದ್ದರು.

29 ಸಂಸ್ಥೆಗಳ 1250 ವಿದ್ಯಾರ್ಥಿಗಳಿಗೆ ತರಬೇತಿ

ಜಿಲ್ಲೆಯ 28 ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಆರೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಒಟ್ಟು 1250 ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಇಂದಿನಿಂದ ಪ್ರಾರಂಭಗೊಂಡ ಈ ಬಾರಿಯ ಉಚಿತ ಸಿಇಟಿ, ಜೆಇಇ, ಎನ್‌ಇಇಟಿ ಆನ್‌ಲೈನ್ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಈ ತರಬೇತಿಯನ್ನು ಆಯೋಜಿಸಿದೆ.

ಕಳೆದ ವರ್ಷ ಮೊದಲ ಬಾರಿ ಪ್ರಾರಂಭಿಸಲಾದ ಈ ತರಬೇತಿಯಲ್ಲಿ 28 ವಿದ್ಯಾ ಸಂಸ್ಥೆಗಳ 1350 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತರಬೇತಿಯಿಂದಾಗಿ ಈ ಕಾಲೇಜುಗಳ ಫಲಿತಾಂಶದಲ್ಲಿ ಶೇ.12ರಿಂದ 15ರಷ್ಟು ಪ್ರಗತಿ ಕಂಡು ಬಂದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶೇ.20ರಿಂದ 35ರಷ್ಟು ಪ್ರಗತಿ ಕಂಡುಬಂದಿದೆ ಎಂದು ತರಬೇತಿಯಲ್ಲಿ ಎಂಐಟಿಯನ್ನು ಪ್ರತಿನಿಧಿಸುವ ಡಾ.ಬಾಲಕೃಷ್ಣ ಮುದ್ದೋಡಿ ತಿಳಿಸಿದರು. ಕಳೆದ ಬಾರಿ ತರಬೇತಿ ಪಡೆದು ಇಬ್ಬರಿಗೆ ಜೆಇಇಯಲ್ಲಿ ಸೀಟು ಸಿಕ್ಕಿದೆ ಎಂದೂ ಅವರು ಹೇಳಿದರು.

ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಸ್ಟುಡಿಯೋ ಸೇರಿದಂತೆ ನೇರ ಪ್ರಸಾರದ ಇತರ ವ್ಯವಸ್ಥೆಗೆ 17 ಲಕ್ಷ ರೂ. ಸೇರಿದಂತೆ ಇಡೀ ವ್ಯವಸ್ಥೆಗಾಗಿ ಒಟ್ಟು 84 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರತಿದಿನ ಅಪರಾಹ್ನ 2ರಿಂದ 4:30ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೇರ ಆನ್‌ಲೈನ್ ಕೋಚಿಂಗ್ ಇರುತ್ತದೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆ, ಸಂಶಯ ಗಳಿಗೆ ಅಲ್ಲೇ ಉತ್ತರವನ್ನೂ ಪಡೆಯಲು ಅವಕಾಶವಿದೆ ಎಂದು ಉಡುಪಿ ಜಿಪಂನ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು. 






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News