ಶೈಕ್ಷಣಿಕ ಧನಸಹಾಯಕ್ಕಾಗಿ ಕಟ್ಟಡ ಕಾರ್ಮಿಕರ ಮಕ್ಕಳಿಂದ ಪತ್ರ ಚಳುವಳಿ

Update: 2023-10-22 12:54 GMT

ಕುಂದಾಪುರ, ಅ.22: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಳೆದ ಎರಡು ವರ್ಷ ಗಳಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ರವಿವಾರ ಮಕ್ಕಳು ರಾಜ್ಯ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಪತ್ರ ಚಳವಳಿ ಆರಂಭಿಸಿದ್ದಾರೆ.

ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿಡಬ್ಲ್ಯುಎಫ್‌ಐ- ಸಿಐಟಿಯು ನೇತೃತ್ವದಲ್ಲಿ ಹೆಮ್ಮಾಡಿ, ಗಂಗೊಳ್ಳಿ, ಕಟ್ ಬೇಲ್ತೂರು ಅಂಪಾರು ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾರ್ಮಿಕ ಮಂತ್ರಿ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡುವ ಮೂಲಕ ಕೂಡಲೇ ವಿದ್ಯಾರ್ಥಿ ವೇತನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.

‘ಕೂಲಿ ಕೆಲಸ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದೇವೆ. ಎರಡು ವರ್ಷ ಗಳ ಹಿಂದೆ ನನ್ನ ಇಬ್ಬರು ಮಕ್ಕಳಿಗೆ ಕ್ರಮ ವಾಗಿ 10ಸಾವಿರ ರೂ. ಮತ್ತು 6 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಆ ಬಳಿಕ ಯಾವುದೇ ಶೈಕ್ಷಣಿಕ ಧನ ಸಹಾಯ ಬಿಡುಗಡೆಗೊಂಡಿಲ್ಲ’ ಎಂದು ಕಟ್ಟಡ ಕಾರ್ಮಿಕ ಹೆಮ್ಮಾಡಿ ಲಕ್ಷ್ಮಣ್ ದೇವಾಡಿಗ ದೂರಿದರು.

ಈಗ ಒಬ್ಬಳು ಪಿಯುಸಿ, ಮತ್ತೊಬ್ಬಳು 9ನೇ ತರಗತಿ ಕಲಿಯುತ್ತಿದ್ದಾರೆ. ಒಂಡೆದೆ ನಮಗೆ ಸರಿಯಾದ ಕೆಲಸ ಕೂಡ ಇಲ್ಲ. ಇನ್ನೊಂದೆಡೆ ಸರಕಾರ ಕೂಡ ಧನ ಸಹಾಯ ಬಿಡುಗಡೆ ಮಾಡುತ್ತಿಲ್ಲ. ಬಡತನದ ಬದುಕಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಷ್ಟವಾಗುತ್ತಿದೆ. ಆದುದರಿಂದ ಸರಕಾರ ಕೂಡಲೇ ಮಕ್ಕಳಿಗೆ ಬಾಕಿ ಇರಿಸಿರುವ ಸಹಾಯಧನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News