ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: ಕುಂದಾಪುರದಲ್ಲಿ ಪ್ರತಿಭಟನೆ

Update: 2023-07-24 13:34 GMT

ಕುಂದಾಪುರ, ಜು.24: ಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಿಳೆಯರ ಅತ್ಯಾಚಾರ, ಕೊಲೆಗಳನ್ನು ಖಂಡಿಸಿ ಸಿಐಟಿಯು, ಜನವಾದಿ ಮಹಿಳಾ ಸಂಘಟನೆ, ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಕುಂದಾಪುರದ ಹೆಂಚು ಕಾರ್ಮಿಕರ ಭವನದ ಆವರಣದಲ್ಲಿ ಪ್ರತಿಭಟನಾ ಸಭೆ ಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಸಂಚಾಲಕ ಚಂದ್ರಶೇಖರ ವಿ. ಮಾತನಾಡಿ, ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರಕಾರ ಬಹು ಸಂಖ್ಯಾತರನ್ನು ಓಲೈಸುವ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೈತೇಹಿ ಮತ್ತು ಕುಕಿ ಸಮುದಾಯದ ಜನರ ಮಧ್ಯೆ ವೈಷಮ್ಯ ಬೆಳೆದು ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ ಬಹಿರಂಗ ಅತ್ಯಾಚಾರ ನಡೆಯುತ್ತಿದೆ. ಕೊಲೆಗಳು, ದೊಂಬಿಗಳು ನಡೆಯುತ್ತಿದ್ದರೂ ಬಿಜೆಪಿ ರಾಜ್ಯ ಸರಕಾರ ಗಲಭೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಕಳೆದ ಸುಮಾರು ತಿಂಗಳಿಂದ ಗಲಭೆಗಳು ನಡೆಯುತ್ತಿರುವ ಮಾಹಿತಿ ಇದ್ದರೂ ಪ್ರಧಾನ ಮಂತ್ರಿಗಳು ಮಾತನಾಡದಿರುವುದು ದುರಂತವಾಗಿದೆ. ಕೂಡಲೇ ಕೇಂದ್ರ ಸರಕಾರವು ರಾಜ್ಯ ಸರಕಾರವನ್ನು ವಜಾ ಮಾಡಿ ಕಾನೂನು ಸುವ್ಯವಸ್ಥೆ ಮರುಸ್ಥಾಪನೆ ಸಿಗಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡ ಎಚ್. ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಹಿರಿಯ ಮುಖಂಡ ಕೆ.ಶಂಕರ್, ಜನವಾದಿ ಮಹಿಳಾ ಸಂಘಟನೆ ನಾಯಕಿ ಶೀಲಾವತಿ ಪಡುಕೋಣೆ, ಬಲ್ಕೀಸ್, ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಮೇಶ ವಿ., ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ರವಿ ವಿ.ಎಂ., ಕಟ್ಟಡ ಕಾರ್ಮಿಕರ ಸಂಘಟನೆಯ ಸಂತೋಷ ಹೆಮ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News