ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ| ವಿಚಾರಣೆಯ ತಡೆಯಾಜ್ಞೆ ತೆರವು: ಹೈಕೋರ್ಟ್ ಆದೇಶ

Update: 2024-09-01 15:39 GMT

ಆರೋಪಿ ಪ್ರವೀಣ್ ಚೌಗುಲೆ

ಉಡುಪಿ: ನೇಜಾರು ತಾಯಿ ಮತ್ತು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ವಿಚಾರಣೆ ಸಂಬಂಧ ನೀಡಿದ ತಡೆಯಾಜ್ಞೆ ಯನ್ನು ತೆರವುಗೊಳಿಸಿ ಆ.30ರಂದು ಆದೇಶ ಹೊರಡಿಸಿರುವ ಹೈಕೋರ್ಟ್, ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯನ್ನು ಮುಂದುವರೆಸಲು ಅನುಮತಿ ನೀಡಿದೆ.

ಬೆದರಿಕೆಯ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾ ಯಿಸುವಂತೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಉಡುಪಿ ನ್ಯಾಯಾ ಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು.

ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಪ್ರಕರಣದ ದೂರುದಾರೆ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಮುಹಮ್ಮದ್ ನವಾಝ್, ತಡೆಯಾಜ್ಞೆಯನ್ನು ತೆರವುಗೊಳಿಸಿ ವಿಚಾರಣೆಯನ್ನು ಮುಂದುವರಿಸಲು ಉಡುಪಿ ಜಿಲ್ಲಾ ನ್ಯಾಯಾ ಲಯಕ್ಕೆ ಅನುಮತಿ ನೀಡಿ ಆದೇಶ ನೀಡಿದ್ದಾರೆ.

ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ಉಡುಪಿಯ ಹಿರಿಯಡ್ಕ ಜೈಲಿನಿಂದ ಬೆಂಗಳೂರು ಸೆಂಟ್ರಲ್ ಜೈಲಿಗೆ ಈಗಾಗಲೇ ವರ್ಗಾಯಿಸಲಾಗಿದೆ. ಇದೀಗ ಆರೋಪಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಆದರೂ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸುವಾಗ ಜೀವ ಬೆದರಿಕೆ ಎದುರಾಗುತ್ತದೆ ಎಂಬ ತಪ್ಪು ಗ್ರಹಿಕೆಯನ್ನು ಮಾಡಲಾಗಿದೆ. ಅದಕ್ಕಾಗಿ ನ್ಯಾಯಾಲಯದ ವಿಚಾರಣೆಯನ್ನು ತಡೆಹಿಡಿಯಲು ಆಗುವುದಿಲ್ಲ. ಆರೋಪಿಯನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಕೂಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಬಹುದು. ಹೈಕೋರ್ಟ್ ತಡೆಯಾಜ್ಞೆಯಿಂದ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಬಾಕಿ ಉಳಿದಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News