ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ: ಜಯಂತ್ ಗೌಡ ಹೆಬ್ರಿ ಪೊಲೀಸ್ ವಶಕ್ಕೆ
ಹೆಬ್ರಿ, ನ.22: ನಾಡ್ಪಾಲು ಗ್ರಾಮದ ಪೀತಬೈಲು ಎಂಬಲ್ಲಿ ನ.18ರಂದು ಸಂಜೆ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಡೆದಿದೆ ಎನ್ನಲಾದ ಮನೆಯ ಯಜಮಾನ ಜಯಂತ್ ಗೌಡ(60) ಅವರನ್ನು ವಿಚಾರಣೆಗಾಗಿ ಹೆಬ್ರಿ ಪೊಲೀಸರು ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಠಾಣೆಗೆ ಕರೆದೊಯ್ದಿದ್ದು, ಇದರಿಂದ ಮನೆಮಂದಿಯಲ್ಲಿ ತೀವ್ರ ಆತಂಕ ನಿರ್ಮಾಣವಾಗಿತ್ತು.
ಮಲೆಕುಡಿಯ ಸಂಘದ ವಿರೋಧದ ಬಳಿಕ ಜಯಂತ್ ಗೌಡರನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಿಕೊಡಲಾಯಿತು.
ನ.13ರಂದು ಮಗ ರಾಕೇಶ್ ಕಂಬದಿಂದ ಬಿದ್ದು ಕೈ ಮುರಿದುಕೊಂಡ ಹಿನ್ನೆಲೆಯಲ್ಲಿ ಜಯಂತ್ ಗೌಡ ತನ್ನ ಪೀತ್‌ಬೈಲು ಮನೆಯಿಂದ ಪತ್ನಿ ಮಕ್ಕಳು ಸಮೇತ ಅಲ್ಲೇ ಐದು ಕಿ.ಮಿ. ದೂರದಲ್ಲಿರುವ ಕಬ್ಬಿನಾಲೆ ಪುಲ್ಲಾಂತ್‌ಬೆಟ್ಟು ಎಂಬಲ್ಲಿರುವ ತನ್ನ ಮಗಳು ಮಾಲತಿ ಅವರ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಆ ಬಳಿಕ ಅವರ ಮನೆಯಲ್ಲಿ ನಡೆದ ಎನ್‌ಕೌಂಟರ್ ಬಗ್ಗೆ ತಿಳಿದು ಇವರೆಲ್ಲ ಇಲ್ಲೇ ಉಳಿದುಕೊಂಡಿದ್ದರು.
ಇಂದು ಬೆಳಗ್ಗೆ ಮಾಲತಿ ಮನೆಗೆ ಏಕಾಏಕಿ ಆಗಮಿಸಿದ ಹೆಬ್ರಿ ಪೊಲೀಸರು, ಜಯಂತ್ ಗೌಡ ಅವರನ್ನು ಠಾಣೆಗೆ ಕರೆದು ಕೊಂಡು ಹೋದರು. ಇದರಿಂದ ಮನೆಮಂದಿ ಭಯಭೀತರಾಗಿ ಆತಂಕಕ್ಕೆ ಒಳಗಾಗಿದ್ದರು. ಈ ಸಂಬಂಧ ಮಾಲತಿ ಮನೆಗೆ ಮಾಧ್ಯಮದವರು ತೆರಳಿದಾಗ ಪತ್ನಿ ಗಿರಿಜಾ, ಮಗಳು ಮಾಲತಿ ಹಾಗೂ ಮಗ ರಾಕೇಶ್ ಆತಂಕ ವ್ಯಕ್ತಪಡಿಸಿ, ತಂದೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
‘ಇವತ್ತು ಬೆಳಗ್ಗೆ ಪೊಲೀಸರು ಮನೆಗೆ ಬಂದು ತಂದೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅವರು ಒಂದು ಲೋಟ ಕಾಪಿಯೂ ಕುಡಿದಿಲ್ಲ, ಊಟ ಕೂಡ ಮಾಡಿಲ್ಲ. ಎನ್‌ಕೌಂಟರ್ ಘಟನೆ ನಡೆಯುವಾಗ ನನ್ನ ತಂದೆ ಇಲ್ಲೇ ಇದ್ದರು. ಆದುದರಿಂದ ಅವರಿಗೆ ಅಲ್ಲಿ ಏನು ಆಗಿದೆ ಎಂಬುದು ಗೊತ್ತಿಲ್ಲ. ಹಾಗಾಗಿ ನಮ್ಮ ಅಪ್ಪ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಏನು ಮಾಡಬಹುದು ಎಂದು ನಮಗೆ ಭಯ ಆಗುತ್ತಿದೆ’ ಎಂದು ಮಾಲತಿ ತಿಳಿಸಿದರು.
ಠಾಣೆ ಎದುರು ಜಮಾವಣೆ: ಜಯಂತ್ ಗೌಡ ಅವರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿರುವ ವಿಚಾರ ತಿಳಿದು ಹೆಬ್ರಿ ಠಾಣೆಯ ಎದುರು ಜಮಾಯಿಸಿದ ಮಲೆಕುಡಿಯ ಸಂಘ ಹಾಗೂ ಸ್ಥಳೀಯ ಗ್ರಾಪಂನವರು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಎನ್‌ಕೌಂಟರ್ ವಿಚಾರದಲ್ಲಿ ಪೊಲೀಸ್ ಇಲಾಖೆ ಸ್ಥಳೀಯರಿಗೆ ಕಿರುಕುಳ ಹಾಗೂ ಮಾನಸಿಕ ಹಿಂಸೆ ನೀಡುತ್ತಿದೆ. ಈ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದು ಹೇಳಿ ಜಯಂತ್ ಗೌಡ ಅವರನ್ನು ಠಾಣೆಗೆ ಕರೆಸಿಕೊಳ್ಳಲಾಗಿದೆ. ಕೂಡಲೇ ಬಿಡುಗಡೆ ಮಾಡುವಂತೆ ಎಸ್ಸೈ ಅವರಿಗೆ ಒತ್ತಾಯ ಮಾಡಿದ್ದೇವೆ. ಸಂಜೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಲೆಕುಡಿಯ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ ಬಂಗೇರ, ನಾಡ್ಪಾಲು ಗ್ರಾಪಂ ಅಧ್ಯಕ್ಷ ನವೀನ್, ಸ್ಥಳೀಯ ಮುಖಂಡ ವಿಜಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಜಯಂತ್ ಗೌಡ ಠಾಣೆಯಿಂದ ಬಿಡುಗಡೆ
ಎನ್‌ಕೌಂಟರ್ ಸಂಬಂಧ ಕರೆದುಕೊಂಡು ಬಂದಿದ್ದ ಜಯಂತ್ ಗೌಡ ಅವರನ್ನು ಪೊಲೀಸರು ಹೆಬ್ರಿ ಠಾಣೆಯಲ್ಲಿ ವಿಚಾರಣೆ ನಡೆಸಿದ್ದು, ಈ ಕುರಿತ ವಿರೋಧದ ಹಿನ್ನೆಲೆಯಲ್ಲಿ ಅಪರಾಹ್ನ 3ಗಂಟೆಗೆ ಸುಮಾರಿಗೆ ಜಯಂತ್ ಗೌಡ ಅವರನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಯಂತ್ ಗೌಡ, ನಾನು ಮನೆ ಬಿಟ್ಟು ಮಗಳ ಮನೆಗೆ ಬಂದು 13 ದಿನ ಆಯಿತು. ಅಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ವಿಚಾರಣೆಯಲ್ಲಿ ಪೊಲೀಸರು ನಿಮಗೆ ಏನಾಯಿತು ಎಂದು ಕೇಳಿದರು. ನಾನು ಅದಕ್ಕೆ ನನಗೆ ಏನು ಆಗಿದೆ ಎಂದು ಗೊತ್ತಿಲ್ಲ ತಿಳಿಸಿದೆ. ಅದು ಬಿಟ್ಟು ಬೇರೆ ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಅದಕ್ಕಾಗಿಯೇ ಅವರು ನನ್ನನ್ನು ಠಾಣೆಗೆ ಕರೆಸಿರುವುದು ಎಂದು ತಿಳಿಸಿದರು.
‘ಹಿಂಸಾತ್ಮಕ ಚಳವಳಿಗೆ ಯಾರು ಬೆಂಬಲ ನೀಡುತ್ತಿಲ್ಲ. ಅದಕ್ಕೆ ನಾವೆಲ್ಲ ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಈ ಹೆಸರಿನಲ್ಲಿ ಆದಿವಾಸಿಗಳಿಗೆ ಪೊಲೀಸರು ಕಿರುಕುಳ ನೀಡುವುದನ್ನು ಖಂಡಿಸುತ್ತೇವೆ. ಜನರು ಮುಂದಿನ ದಿನಗಳಲ್ಲಿ ವ್ಯವಸ್ಥೆ ವಿರುದ್ಧ ದಂಗೆ ಏಳುವ ಪರಿಸ್ಥಿತಿಯನ್ನು ಇಲಾಖೆಯವರು ನಿರ್ಮಿಸಬಾರದು. ನಾವು ಸಂವಿಧಾನತ್ಮಕವಾಗಿ ಹೋರಾಟ ಮಾಡುವವರಿಗೆ ಮಾತ್ರ ಬೆಂಬಲ ನೀಡುತ್ತೇವೆ ಹೊರತು ಹಿಂಸೆಯಿಂದ ಹೋರಾಟ ಮಾಡುವವರಿಗೆ ಅಲ್ಲ. ಆದುದರಿಂದ ವಿಚಾರಣೆ ನೆಪದಲ್ಲಿ ಅಮಾಯಕರನ್ನು ಬಲಿಪಶು ಮಾಡಿ ಅವರ ನೆಮ್ಮದಿ ಹಾಳು ಮಾಡಬೇಡಿ. ಅವರು ಬದುಕು ಕಟ್ಟಿಕೊಳ್ಳಲು ಸರಕಾರ ಅವಕಾಶ ನೀಡಲಿ’ -ಶ್ರೀಧರ ಗೌಡ, ಅಧ್ಯಕ್ಷರು, ರಾಜ್ಯ ಮಲೆಕುಡಿಯ ಸಂಘ
‘ಪೀತಬೈಲಿನ ಜಯಂತ್ ಗೌಡ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆಸಲಾಗಿತ್ತು. ಅವರ ಮನೆಯಲ್ಲಿ ಘಟನೆ ನಡೆದಿರುವುದರಿಂದ ಅವರ ಮನೆಗೆ ಯಾಕೆ ಬಂದಿದ್ದರು ಎಂಬ ಮಾಹಿತಿ ಪಡೆಯಲು ಅವರನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದೇವೆ’
-ಡಾ.ಕೆ.ಅರುಣ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಉಡುಪಿ.