ಅವರ ಹೋರಾಟ ಇಲ್ಲದಿದ್ದರೆ ನಮ್ಮನ್ನು ಯಾವತ್ತೊ ಒಕ್ಕಲೆಬ್ಬಿಸುತ್ತಿದ್ದರು: ಕಬ್ಬಿನಾಲೆಯ ಕುಚ್ಚೂರು ಸದಾಶಿವ ಗೌಡ
ಹೆಬ್ರಿ: ‘ವಿಕ್ರಂ ಗೌಡ ನಮ್ಮ ಜಾತಿ ಮಗ. ಅವನ ಈ ರೀತಿ ದಾರುಣ ಅಂತ್ಯ ಕಂಡಿರುವುದು ನೋಡಿದರೆ ನೋವಾಗುತ್ತದೆ. ಅವರ ಹೋರಾಟ ಇಲ್ಲದಿದ್ದರೆ ನಮ್ಮನ್ನು ಇಲ್ಲಿಂದ ಯಾವತ್ತೋ ಒಕ್ಕಲ್ಲೇಬ್ಬಿಸಿ ಬೇರೆ ಕಡೆ ಕಳುಹಿಸುತ್ತಿದ್ದರು’ ಎಂದು ಕಬ್ಬಿನಾಲೆಯ ಕುಚ್ಚೂರು ದರ್ಖಾಸ್ ನಿವಾಸಿ ಸದಾಶಿವ ಗೌಡ ಹೇಳಿದ್ದಾರೆ.
ಹೆಬ್ರಿಯಲ್ಲಿ ಗಣೇಶ್ ಹೊಟೇಲಿನಲ್ಲಿ ಕೆಲಸ ಮಾಡುತ್ತಿರುವ ವಿಕ್ರಮ ಗೌಡನನ್ನು ನಾನು ನೋಡಿದ್ದೆ. ಒಳ್ಳೆಯ ಹುಡುಗ. ಅವನನ್ನು ಸಾಯುವ ರೀತಿ ಮಾಡಿರುವುದೇ ಅರಣ್ಯ ಇಲಾಖೆಯವರು. ಹೋರಾಟದಲ್ಲಿ ಭಾಗವಹಿಸಿದ್ದ ಎಂಬ ಕಾರಣಕ್ಕೆ ಅವನಿಗೆ ಥಳಿಸಿ ಕಿರುಕುಳ ನೀಡಿದ್ದಾರೆ. ಮನೆಯೊಳಗೆ ಬಂದು ಊಟ ಚೆಲ್ಲಿ ಹೋಗಿದ್ದರು. ಆ ರೋಷ ಅವನಲ್ಲಿ ಇತ್ತು. ಆದರೆ ಈಗ ನಮಗೆ ಅರಣ್ಯ ಇಲಾಖೆಯ ಕಿರುಕುಳ ಕಡಿಮೆ ಆಗಿದೆ ಎಂದರು.
ಈ ಪರಿಸರದಲ್ಲಿ ಪೊಲೀಸ್ ಮಾಹಿತಿದಾರ ಎಂಬ ನೆಲೆಯಲ್ಲಿ ಸದಾಶಿವ ಗೌಡನ ಹತ್ಯೆ ಮಾಡಿರುವುದು ಬಿಟ್ಟರೆ ನಕ್ಸಲರಿಂದ ಸ್ಥಳೀಯರಿಗೆ ಯಾವುದೇ ತೊಂದರೆ ಆಗಿಲ್ಲ. ಕಸ್ತೂರಿ ರಂಗನ್ ವರದಿ ಹಾಗೂ ಒಕ್ಕಲೆಬ್ಬಿಸುವುದರ ಬಗ್ಗೆ ನಮಗೆ ಈಗಲೂ ಭಯ ಇದೆ. ನಮಗೆ ಇಲ್ಲಿ ಅಗತ್ಯವಾಗಿ ಬೇಕಾಗಿರುವುದು ರಸ್ತೆ. ಮಕ್ಕಳನ್ನು ಶಾಲೆಗೆ ಬಿಡಲು ಮೂರು ಕಿ.ಮೀ. ದೂರ ಹೋಗಬೇಕು. ಮಳೆಗಾಲದಲ್ಲಿ ಅಂತೂ ತುಂಬಾ ಕಷ್ಟ ಎಂದು ಅವರು ತಿಳಿಸಿದರು.