"ಉಡುಪಿ ಜಿಲ್ಲೆಯಲ್ಲಿ ಮಂಗನಕಾಯಿಲೆ ಪ್ರಕರಣ ಬಾರದಂತೆ ಮುನ್ನೆಚ್ಚರಿಕೆ ವಹಿಸಿ"
ಉಡುಪಿ, ನ.22: ಕ್ಯಾಸನೂರು ಅರಣ್ಯರೋಗ ಅಥವಾ ಮಂಗನ ಜ್ವರ ಕಾಯಿಲೆ ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ವರೆಗೆ ಕಂಡುಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇವುಗಳ ನಿಯಂತ್ರಣಕ್ಕೆ ಇಲಾಖೆಗಳು ಸಮನ್ವಯದೊಂದಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಎಫ್‌ಡಿ ಹಾಗೂ ಇತರ ಪ್ರಾಣಿಜನ್ಯ ರೋಗ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಆಯೋಜಿಸಲಾದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಪಶ್ಚಿಮ ಘಟ್ಟ ಪ್ರದೇಶಗಳು ಹಾಗೂ ಮಲೆನಾಡು ಭಾಗದಲ್ಲಿ ಕ್ಯಾಸನೂರು ಅರಣ್ಯರೋಗವು ಕಳೆದ ಹಲವು ವರ್ಷಗಳಿಂದ ಕಂಡು ಬರುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಕಾಡಂಚಿನ ಪ್ರದೇಶಗಳಲ್ಲಿ ಈ ಹಿಂದೆ ಆಗಿರುವುದು ಕಂಡು ಬಂದಿದೆ. ಆದರೆ ಪ್ರಸ್ತುತ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದರು.
ಉಷ್ಣಾಂಶ ಹೆಚ್ಚಿರುವ ನವೆಂಬರ್‌ನಿಂದ ಜೂನ್‌ವರೆಗೆ ಈ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಉರುವ ಲನ್ನು ತರಲು ಕಾಡಿಗೆ ಹೋಗಿ ಬಂದಾಗ ಅಥವಾ ಜಾನುವಾರುಗಳು ಕಾಡಿನಲ್ಲಿ ಮೇಯಲು ಹೋದಾಗ ಉಣ್ಣೆ ಗಳು ಅವುಗಳ ಜೊತೆಯಲ್ಲಿ ಬಂದು ಮನುಷ್ಯನಿಗೆ ಕಚ್ಚಿದಾಗ ಈ ಕಾಯಿಲೆ ಬರುತ್ತದೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.
ಮಂಗ ಸತ್ತ ಜಾಗವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ, ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಜ್ವರ ಇರುವ ಕುರಿತು ಸರ್ವೇ ನಡೆಸಲಾಗುವುದು ಎಂದ ಡಾ.ವಿದ್ಯಾಕುಮಾರಿ, ಗ್ರಾಪಂಗಳ ವ್ಯಾಪ್ತಿಯಲ್ಲಿ ಸ್ಥಳೀಯ ಆರೋಗ್ಯ ಸಮಿತಿ ಸಭೆಗಳನ್ನು ನಡೆಸಿ ಸ್ಥಳೀಯ ಜನರಿಗೆ ಆರೋಗ್ಯ ಸುಧಾರಣೆ ಬಗ್ಗೆ ಸ್ಥಳೀಯ ವಾಗಿ ಪ್ರಚಾರ ಕೈಗೊಳ್ಳಬೇಕು. ಹಾಗೂ ಹೊರಗಿನಿಂದ ಬಂದ ಪ್ರವಾಸಿಗ ರಿಗೂ ಸಹ ಸೂಕ್ತ ಮಾಹಿತಿಗಳನ್ನು ನೀಡಬೇಕು ಎಂದರು.
ಈ ರೋಗಗಳ ಕುರಿತು ಮುಂಜಾಗ್ರತೆಯಾಗಿ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಅರಣ್ಯ ಪ್ರದೇಶದ ಸುತ್ತಮುತ್ತ ವಾಸಿಸುವ ಜನರಿಗೆ ಈ ಕಾಯಿಲೆ ಬರುವ ಅಪಾಯ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸ ಬೇಕು. ಮಂಗನ ಜ್ವರ ಬಂದರೆ ಮೂರರಿಂದ ಐದು ದಿನಗಳ ಕಾಲ ತೀವ್ರ ತರಹದ ಜ್ವರ, ತೀವ್ರ ದೇಹನೋವು, ಕಣ್ಣು ಕೆಂಪಾಗುವುದು, ನೆಗಡಿ ಮತ್ತು ಕೆಮ್ಮಿನ ಲಕ್ಷಣಗಳು ಕಂಡುಬರುತ್ತವೆ ಎಂದು ವಿವರಿಸಿದರು.
ಕಾಡಿನಲ್ಲಿ ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ತಮ್ಮ ಆರೋಗ್ಯದ ಬಗ್ಗೆಯೂ ಮುನ್ನೆಚ್ಚರಿಕಾ ಕ್ರಮ ಗಳನ್ನು ಕೈಗೊಳ್ಳ ಬೇಕು. ಜನರಿಗೆ ಅರಿವು ಮೂಡಿಸಲು ಹೆದ್ದಾರಿ ಫಲಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ನಾಯಿ ಕಚ್ಚಿದವರಿಗೆ ಹಾಗೂ ಹಾವು ಕಚ್ಚಿದ ವ್ಯಕ್ತಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಲಸಿಕೆಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ.ಎಚ್ ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಪ್ರಶಾಂತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.