ಪರಂಪರೆಯ ಯಕ್ಷಗಾನ ಕಲೆಗೆ ಪ್ರೋತ್ಸಾಹ ಅಗತ್ಯ: ಡಾ.ಬಲ್ಲಾಳ್
ಉಡುಪಿ: ಯಕ್ಷಗಾನ ಕಲೆಗೆ ಪ್ರಾಚೀನ ಇತಿಹಾಸದೆ. ಅದು ಬೆಳೆದು ಬಂದ ಬಗೆ ನಿಜಕ್ಕೂ ಆಶ್ಚರ್ಯ ತರುತ್ತಿದೆ. ಇಂದು ಯಕ್ಷಗಾನ ಕಲೆಯ ಬಗ್ಗೆ ಜನರಲ್ಲಿ ಆಸಕ್ತಿ ಇದೆ. ಶಾಲಾ ಕಾಲೇಜುಗಳಲ್ಲಿಯೂ ಮಕ್ಕಳು ಅದರಲ್ಲಿ ಭಾಗವಹಿಸುವುದನ್ನು ನೋಡಿದರೆ ಮುಂದೆ ಅದು ಇನ್ನೂ ಹೆಚ್ಚು ಜನಪ್ರಿಯವಾಗಲಿದೆ. ಈ ನಿಟ್ಟಿನಲ್ಲಿ ಉಡುಪಿಯ ಇಂದ್ರಾಳಿಯ ಯಕ್ಷಗಾನ ಕೇಂದ್ರ ಕಲೆಯ ಪ್ರೋತ್ಸಾಹಕ್ಕೆ ಶ್ರಮಿಸುತ್ತಿದೆ. ಪರಂಪರೆಯ ಯಕ್ಷಗಾನ ಕಲೆಗೆ ಜನ ಬೆಂಬಲ ನೀಡಬೇಕು ಎಂದು ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಹೇಳಿದ್ದಾರೆ.
ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಯಕ್ಷಗಾನ ಕೇಂದ್ರ ಇಂದ್ರಾಳಿ ಕೊಡಮಾಡುವ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರಿ ಅವರಿಗೆ 2024ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಗನ್ನಾಥ ಆಚಾರಿ ಅವರು ಗುರು ವೀರಭದ್ರ ನಾಯಕರ ಶಿಷ್ಯನಾಗಿ ತಾನು ಪಡೆದುಕೊಂಡ ಅನುಭವ ಹಾಗೂ ಡಾ.ಕೋಟ ಶಿವರಾಮ ಕಾರಂತರ ಪ್ರೋತ್ಸಾಹವನ್ನು ಸ್ಮರಿಸಿದರು.
ಮಾಹೆಯ ಸಹಕುಲಪತಿ ಡಾ.ನಾರಾಯಣ ಸಭಾಹಿತ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ಡಾ.ಜಿ.ಶಂಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉದ್ಯಮಿ ಪುರುಷೋತ್ತಮ ಶೆಟ್ಟಿ ಹಾಗೂ ಪೆರ್ಡೂರು ಮೇಳದ ಯಜಮಾನರಾದ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಗುರು ಉಮೇಶ್ ಸುವರ್ಣ ಪ್ರಾರ್ಥಿಸಿದರೆ, ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಪ್ರಸ್ತಾವನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಲಹಾ ಸಮಿತಿ ಸದಸ್ಯ ಭುವನಪ್ರಸಾದ ಹೆಗ್ಡೆ ವಂದಿಸಿದರು.