ಶಿರೂರು| ಕಳಚಿಕೊಂಡ ರೈಲು ಬೋಗಿಗಳು: ತಪ್ಪಿದ ಅನಾಹುತ

Update: 2024-07-01 15:07 GMT

ಶಿರೂರು, ಜು.1: ಗೂಡ್ಸ್ ರೈಲೊಂದರ ಬೋಗಿ ಕಳಚಿಕೊಂಡು ಅರ್ಧ ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಉಂಟಾದ ಘಟನೆ ಸೋಮವಾರ ಮುಂಜಾನೆ ಹಡವಿನಕೋಣೆ ರೈಲ್ವೆ ಗೇಟ್‌ನಲ್ಲಿ ನಡೆದಿದೆ.

ಮಂಗಳೂರಿನಿಂದ ಮಡಗಾಂವ್ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಮಧ್ಯಭಾಗದಲ್ಲಿ ಬೋಗಿಗಳು ಕಳಚಿಕೊಂಡು ಬೇರ್ಪಟ್ಟ ಪರಿಣಾಮ ಆತಂಕ ಉಂಟಾಯಿತು. ಮಾತ್ರವಲ್ಲದೆ ರೈಲ್ವೆ ಗೇಟ್ ಹಾಕಿದ ಕಾರಣ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿತ್ತು. ತಕ್ಷಣ ಎಚ್ಚೆತ್ತುಕೊಂಡ ರೈಲ್ವೆ ಅಧಿಕಾರಿಗಳು ಅಲ್ಲಿನ ಬೋಗಿಗಳನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

‘ಶೀರೂರು ಬಿಜೂರ್ ವಿಭಾಗದ ನಡುವೆ ಗೂಡ್ಸ್ ರೈಲಿನ ಬ್ರೇಕ್ ಪೈಪ್ ತಾಂತ್ರಿಕ ಸಮಸ್ಯೆಯಿಂದಾಗಿ ಸಂಪರ್ಕ ಕಡಿತ ಗೊಂಡಿದ್ದು, ಬಳಿಕ ಅರ್ಧ ಗಂಟೆಯೊಳಗೆ ಈ ರೈಲನ್ನು ಮರುಪ್ರಾರಂಭಿಸಲಾಯಿತು. ಇದರಿಂದ ಯಾವುದೇ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿಲ್ಲ’ ಎಂದು ರೈಲ್ವೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News