ಬೈಂದೂರಿನ ನಾವುಂದ, ಸಾಲ್ಬುಡ, ಬಡಾಕೆರೆಯಲ್ಲಿ ನೆರೆ ಏರಿಕೆ: ಜನ, ಜಾನುವಾರುಗಳಿಗೆ ಜಲ ದಿಗ್ಭಂಧನ

Update: 2024-07-04 13:04 GMT

ಬೈಂದೂರು, ಜು.4: ಕಳೆದ 25 ವರ್ಷಗಳಿಂದ ಮಳೆಗಾಲ ಬಂದರೆ ಬೈಂದೂರು ತಾಲೂಕಿನ ನಾವುಂದ, ಸಾಲ್ಬುಡ, ಬಡಾಕೆರೆ ಮೊದಲಾದ ಜನರಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ. ಮಳೆಗಾಲದಲ್ಲಿ ಇಲ್ಲಿನ ನೂರಕ್ಕೂ ಅಧಿಕ ಮನೆಯವರಿಗೆ ಜಲದಿಗ್ಭಂಧನ ತಪ್ಪದ ಗೋಳು.

ಇನ್ನು ಈ ಗ್ರಾಮಗಳ ಜನರಿಗೆ ನೆರೆ ಇಳಿದು ಸಹಜ ಸ್ಥಿತಿಯತ್ತ ಬರಲು ಮೂರ್ನಾಲ್ಕು ದಿನಗಳಾದರೂ ಬೇಕು. ಅಲ್ಲಿಯವರೆಗೆ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಮನೆಗೆ ನಿತ್ಯ ಬೇಕಾದ ಹಾಲು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಪಯಣ ಅಗತ್ಯ.

ಮಲೆನಾಡು ಪ್ರದೇಶದಲ್ಲಿ ವಿಪರೀತ ಮಳೆ ಬಂದರೆ ಇಲ್ಲಿನ ಸೌಪರ್ಣಿಕಾ ನದಿಪಾತ್ರದಲ್ಲಿರುವ ನಾವುಂದ-ಸಾಲ್ಬುಡ ಪ್ರದೇಶ ಬಹುತೇಕ ಮುಳುಗಡೆ ಯಾಗುತ್ತದೆ. ಕಳೆದೆರೆಡು ದಿನದಿಂದ ಗಾಳಿ ಮಳೆ ವ್ಯಾಪಕವಾಗಿರುವ ಹಿನ್ನೆಲೆ ಯಲ್ಲಿ ಗುರುವಾರ ಮುಂಜಾನೆಯಿಂದಲೇ ಸೌಪರ್ಣಿಕಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ನಾವುಂದ-ಸಾಲ್ಬುಡ-ಅರೆಹೊಳೆ ಸಂಪರ್ಕ ರಸ್ತೆ ಮುಳುಗಿದೆ. 100ಕ್ಕೂ ಅಧಿಕ ಮನೆಗಳು ಜಲದಿಗ್ಬಂಧನಕ್ಕೊಳಗಾಗಿದ್ದು ಪುಟಾಣಿ ಮಕ್ಕಳನ್ನು ಹೊತ್ತು ಕೊಂಡು ತಾಯಂದಿರು ನೆರೆ ನೀರು ವೀಕ್ಷಿಸುವ ದೃಶ್ಯ ಕಂಡುಬಂತು. ಇನ್ನು ಕೊಟ್ಟಿಗೆಯಲ್ಲಿ ಜಾನುವಾರುಗಳು ಮಳೆ ನೀರಿನ ನಡುವೆ ನಿಂತಿವೆ.

ಯುವಕರ ಶ್ರಮದಾನ: ನಾವುಂದ, ಬಡಾಕೆರೆ, ಮರವಂತೆ ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಈ ವರ್ಷವೂ ತಪ್ಪಿಲ್ಲ. ಹಲವು ದಶಕಗಳಿಂದ ಇಲ್ಲಿನ ಜನರು ಮಳೆಗಾಲದಲ್ಲಿ ಮೂರ್ನಾಲ್ಕು ದೋಣಿಗಳನ್ನು ಇಲ್ಲಿಗಾಗಿಯೇ ಮೀಸಲಿಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಅನಾರೋಗ್ಯ ಪೀಡಿತರು ಸಹಿತ ಆಹಾರ ಸಾಮಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಸುಮಾರು ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸವಾಗಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಯುವಕರ ಸಹಿತ ದೋಣಿ ಚಲಾಯಿಸಲು ತಿಳಿದ ಹಲವು ಮಂದಿ ದೋಣಿ ಮೂಲಕ ಸಾರ್ವಜನಿಕರಿಗೆ ನೆರವಾಗುವ ಸಾಹಸಿಗಳಾಗಿ ಶ್ರಮದಾನ ಮಾಡುತ್ತಾರೆ ಎಂದು ಸ್ಥಳೀಯರಾದ ಫಾರುಖ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಆಡಳಿತ ಅಧಿಕಾರಿ ಪ್ರದೀಪ್, ತಾಲೂಕು ಪಂಚಾಯತಿ ಇಒ ಭಾರತಿ, ಬೈಂದೂರು ಅಗ್ನಿಶಾಮಕದ ಸಿಬ್ಬಂದಿಗಳು, ಬೈಂದೂರು ಪೊಲೀಸರು, ನಾಡ, ನಾವುಂದ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಸ್ಥಳಕ್ಕೆ ಬಂದ ತಹಶೀಲ್ದಾರ್ ಬಳಿ ಪ್ರತಿ ವರ್ಷದ ಸಮಸ್ಯೆಗಳ ಕುರಿತಂತೆ ಅವಲತ್ತುಕೊಂಡ ಸ್ಥಳೀಯರು, ಜಾನುವಾರು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲು ಅಗತ್ಯ ಶೆಡ್ ನಿರ್ಮಾಣ ಮಾಡಬೇಕು. ದೋಣಿ, ರೋಪ್ ಸಹಿತ ಅಗತ್ಯ ಮುನ್ನೆಚ್ಚ ರಿಕೆ ಕ್ರಮವನ್ನು ಕೈಗೊಳ್ಳುವಂತೆ ಬಲವಾಗಿ ಆಗ್ರಹಿಸಿದ ಘಟನೆಯೂ ನಡೆಯಿತು.

‘ಜನಪ್ರತಿನಿಧಿಗಳು, ಅಧಿಕಾರಿಗಳು ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋದವರು ಮತ್ತೆ ಈ ಕಡೆ ತಲೆಯನ್ನು ಹಾಕುವುದಿಲ್ಲ. ಯಾವುದೇ ಸರಕಾರ ಆಡಳಿತದಲ್ಲಿದ್ದಾಗಲೂ ಇದುವರೆಗೂ ಯಾವುದೇ ಪ್ರಯೋಜನವಾಗಲಿಲ್ಲ.

-ಹರೀಶ್ ನಾವುಂದ, ಸ್ಥಳೀಯರು.

"ಕಳೆದ 2-3 ದಶಕಗಳಿಂದ ಇದೇ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಂಜೆಯಿಂದ ಬೆಳಿಗ್ಗೆಯೊಳಗೆ ನೆರೆ ಏರಿ ಊರಿಗೆ ಊರು ದಿಗ್ಭಂಧನ ಗೊಳ್ಳುತ್ತದೆ. ಕೃಷಿ ಭೂಮಿ ಸಂಪೂರ್ಣ ಹಾಳಾಗುತ್ತದೆ. ಸುಮಾರು 100 ಮನೆಗಳ ಸಾವಿರಾರು ಮಂದಿ ಪಡಿಪಾಟಲು ಪಡುತ್ತಾರೆ. ರಸ್ತೆಯ ಮಟ್ಟವನ್ನು ಏರಿಸಿದಲ್ಲಿ ಪ್ರತಿವರ್ಷದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ".

- ವಿಠಲ ಗಾಣಿಗ ನಾವುಂದ.

"ಎಸ್‌ಡಿಆರ್‌ಎಫ್ ಹಾಗೂ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಬೆಳಗ್ಗೆಯಿಂದ ನೆರೆ ಪ್ರದೇಶದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೈಂದೂರಿನಲ್ಲಿ ಅಗತ್ಯವಿದ್ದಷ್ಟು ಕಾಳಜಿ ಕೇಂದ್ರ ತೆರೆಯಲಾಗಿದೆ. ಗ್ರಾಪಂಗೆ ಸಂಬಂಧಿಸಿದಂತೆ ಅಗತ್ಯ ಕ್ರಮವಹಿಸಲು ಸೂಚನೆ ನೀಡಲಾಗುತ್ತದೆ".

-ಪ್ರದೀಪ್, ಬೈಂದೂರು ತಹಶೀಲ್ದಾರ್.











Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News