ಗ್ರಾಪಂ ಪಿಡಿಒರನ್ನು ಕೂಡಲೇ ವರ್ಗಾಯಿಸಿ: ಬಿಜೆಪಿ ಬೆಂಬಲಿತ ಬಣ

Update: 2024-07-01 16:03 GMT

ಬಿಜೆಪಿ ಬೆಂಬಲಿತ ಬಣ

ಉಡುಪಿ, ಜು.1: ಗ್ರಾಮದ ಅಭಿವೃದ್ಧಿ ಕುರಿತಂತೆ ಹಾಗೂ ಜನರ ಸಮಸ್ಯೆ ಗಳಿಗೆ ಯಾವುದೇ ರೀತಿಯಲ್ಲಿ ಸ್ಪಂಧಿಸದಿರುವ ಪೆರ್ಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸುಮನ ಕೆ. ಅವರನ್ನು ಕೂಡಲೇ ವರ್ಗಾವಣೆ ಮಾಡು ವಂತೆ, ಇಲ್ಲದಿದ್ದರೆ ಬಹುಸಂಖ್ಯಾತ ಸದಸ್ಯರೆಲ್ಲ ಸೇರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಬೆಂಬಲಿತ ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರ್ಡೂರು ಗ್ರಾಪಂನ ಪಿಡಿಒ ಆಗಿರುವ ಚೇತನಾ ಅವರು, ಬೈರಂಪಳ್ಳಿ ಗ್ರಾಪಂಗೂ ಪ್ರಭಾರಿಯಾಗಿದ್ದಾರೆ. ವಾರದಲ್ಲಿ ತಲಾ ಮೂರು ಮೂರು ದಿನಗಳಂತೆ ಎರಡೂ ಗ್ರಾಪಂಗಳಲ್ಲಿ ಅವರು ಲಭ್ಯರಿರಬೇಕು. ಆದರೆ ಅವರು ಒಂದು ದಿನವೂ ಸರಿಯಾಗಿ ಗ್ರಾಪಂನಲ್ಲಿರುವುದಿಲ್ಲ. ಇದರಿಂದ ಪಂಚಾಯತ್‌ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುವುದಿಲ್ಲ ಎಂದು ದೂರಿದರು.

ಇದರಿಂದ ಗ್ರಾಮದ ಜನರಿಗೆ ಅಗತ್ಯವಾದ 9/11, 11ಬಿ. ಕರೆಂಟ್ ಎನ್‌ಓಸಿ, ಡೋರ್ ನಂ. ಯಾವುದನ್ನೂ ಕೊಡುತ್ತಿಲ್ಲ. ಜನರು ಪದೇ ಪದೇ ಕಚೇರಿಗೆ ಅಲೆದು ವಾಪಾಸಾಗುತಿದ್ದಾರೆ. ಅವರ ಬಳಿಕ ಈ ಬಗ್ಗೆ ಪ್ರಶ್ನಿಸಿದರೆ ನಿಮ್ಮ ಮೇಲೆ ಜಾತಿ ನಿಂದನೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಹೀಗಾಗಿ ಗ್ರಾಮಸ್ಥರು ಕಚೇರಿಗೆ ಬರಲು ಹೆದರುತಿದ್ದಾರೆ. ಇದೇ ಬೆದರಿಕೆಯನ್ನು ಅಧ್ಯಕ್ಷರಾದ ತಮಗೆ ಹಾಗೂ ಉಳಿದ ಸದಸ್ಯರ ಹಾಕುತ್ತಾರೆ ಎಂದರು.

ಪಿಡಿಒ ಅವರ ವರ್ತನೆ ಹಾಗೂ ಕರ್ತವ್ಯ ಲೋಪದ ಕುರಿತಂತೆ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಮೊನ್ನಿನ ಜನಸ್ಪಂದನ ಸಭೆಯಲ್ಲಿ ದೂರುದಾರೊಬ್ಬರ ಅರ್ಜಿಯ ಕುರಿತಂತೆ ಎತ್ತಿದ್ದು, ಜನರಿಗೆ ತೊಂದರೆ ನೀಡದಂತೆ ಸಲಹೆ ನೀಡಿದ್ದರು. ಇದಕ್ಕೆ ಉತ್ತರವಾಗಿ ಸಾಮಾಜಿಕ ಜಾಲತಾಣದಲ್ಲಿ ಪಿಡಿಒ ಪರವಾಗಿ ಹೇಳಿಕೆಯೊಂದು ಬಂದಿದ್ದು, ಅದು ಸಂಪೂರ್ಣ ಸತ್ಯಕ್ಕೆ ದೂರವಾದುದು ಎಂದು ಗ್ರಾಪಂ ಅಧ್ಯಕ್ಷರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷ ದೇವು ಪೂಜಾರಿ, ಸದಸ್ಯ ತುಕಾರಾಮ್ ನಾಯಕ್,ಹರ್ಷಿತ್ ಪೂಜಾರಿ, ಬೈರಂಪಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಜಿಯಾನಂದ ಹೆಗ್ಡೆ, ಸದಸ್ಯ ರಶೀದ್ ಉಪಸ್ಥಿತರಿದ್ದರು.

ಪ್ರಾಮಾಣಿಕ ಅಧಿಕಾರಿಗೆ ಮಾನಸಿಕ ಹಿಂಸೆ: ಕಾಂಗ್ರೆಸ್ ಬೆಂಬಲಿತ ಬಣದ ಪ್ರತ್ಯಾರೋಪ


ಇದೇ ವೇಳೆ ಗ್ರಾಪಂನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇನ್ನೊಂದು ಪತ್ರಿಕಾಗೋಷ್ಠಿ ನಡೆಸಿ ಜನಸ್ಪಂದನ ಕಾರ್ಯಕ್ರಮ ದಲ್ಲಿ ಪ್ರಾಮಾಣಿಕ ದಲಿತ ಅಧಿಕಾರಿ ಪಿಡಿಒ ಸುಮನ ಕೆ. ಅವರನ್ನು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸಾರ್ವಜನಿಕವಾಗಿ ಗದರಿಸಿ ದರ್ಪ ತೋರಿರುವುದು ಖಂಡನೀಯ ಎಂದು ಪೆರ್ಡೂು ಗ್ರಾಪಂ ಸದಸ್ಯ ಸಂತೋಷ ಕುಲಾಲ್ ಹೇಳಿದ್ದಾರೆ.

ಪೆರ್ಡೂರು ಪಂಚಾಯತ್‌ನಲ್ಲಿ ಪಿಡಿಒ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಪಂಚಾಯತ್‌ನಲ್ಲಿ ಅವ್ಯಾಹತವಾಗಿ ನಡೆಯು ತಿದ್ದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ಕಾನೂನು ಪಾಲನೆ ಮಾಡುತ್ತಿರುವುದು ಅಪರಾಧವೇ ಎಂದು ಅವರು ಪ್ರಶ್ನಿಸಿದರು.

ಪಿಡಿಒ ಸುಮನಾ ಅವರು ಪೆರ್ಡೂರು ಪಂಚಾಯತ್‌ನಲ್ಲಿ ಉಳಿಯಬೇಕು. ಅವರನ್ನು ವರ್ಗಾವಣೆ ಮಾಡಲು ಒತ್ತಡ ತಂದರೆ, ಅಥವಾ ಅವರಿಗೆ ಬೆದರಿಸಿ, ಕರ್ತವ್ಯ ನಿಭಾಯಿಸಲು ತೊಂದರೆ ನೀಡಿದರೆ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ಮಾಡುವುದಾಗಿ ಸಂತೋಷ ಕುಲಾಲ್ ಎಚ್ಚರಿಸಿದರು.

ಖಾಸಗಿಯವರ ಜಾಗಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ನಾಯಕರ ಮಾತು ಕೇಳಿ ಶಾಸಕರು ಪಿಡಿಒ ಅವ ರನ್ನು ಸಭೆಯಲ್ಲಿ ಗದರಿಸಿದ್ದಾರೆ ಎಂದವರು ದೂರಿದರು.

ಸುಮಾರು ಮೂರು ತಿಂಗಳ ಕಾಲ ಚುನಾವಣಾ ನೀತಿ ಸಂಹಿತೆ ಜಾರಿಯ ಲ್ಲಿದ್ದುದರಿಂದ ಪಿಡಿಒ ಯಾವುದೇ ನಿರ್ಣಯ ತೆಗೆದುಕೊಳ್ಳುವಂತಿರಲಿಲ್ಲ. ಆದರೂ ಅವರು ಕೆಲಸ ಮಾಡುತ್ತಿಲ್ಲ ಎಂದು ಅಧ್ಯಕ್ಷರು ಹಾಗೂ ಇತರರು ಆರೋಪ ಮಾಡುತಿ ದ್ದಾರೆ. ನಿಜ ಹೇಳಬೇಕೆಂದರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವುದರಿಂದ ಅವರನ್ನು ವರ್ಗಾವಣೆ ಮಾಡಲು ಒತ್ತಾಯಿಸ ಲಾಗುತ್ತಿದೆ ಎಂದು ಸಂತೋಷ ಕುಲಾಲ್ ಆರೋಪಿಸಿದರು.

ಶಾಸಕರು ಇಂಥ ವಿಷಯಗಳನ್ನು ಬಿಟ್ಟು, ಗ್ರಾಪಂನಲ್ಲಿ ಇರುವ ಸಿಬ್ಬಂದಿಗಳ ಕೊರತೆ ತುಂಬಲು ಪ್ರಾಮಾಣಿಕವಾಗಿ ಕೆಲಸ ಮಾಡಲಿ ಎಂದರು. 28 ಸದಸ್ಯರ ಪೆರ್ಡೂರು ಗ್ರಾಪಂನಲ್ಲಿ ಕಳೆದ ಚುನಾವಣೆಯಲ್ಲಿ 16 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ 12 ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆ ಯಾಗಿದ್ದು, ಕುದುರೆ ವ್ಯಾಪಾರ ಮಾಡಿ ಅವರು ಅಧಿಕಾರಕ್ಕೇರಿದ್ದಾರೆ ಎಂದೂ ಕುಲಾಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ದಿನೇಶ್ ಪೂಜಾರಿ, ಉದಯ ಕುಲಾಲ್, ರಾಘವೇಂದ್ರ ಟೈಲರ್, ಸತೀಶ್ ನಾಯಕ್, ದಯಾನಂದ ಶೆಟ್ಟಿ, ಶೋಭಾ ಗಾಮ್ಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News