ನಾರ್ವೆಗೆ ಎಂಟು ಡ್ರೈ ಕಾರ್ಗೋ ಹಡಗು ನಿರ್ಮಿಸಲು ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್‌ನಿಂದ ಒಪ್ಪಂದ

Update: 2024-07-01 16:05 GMT

ಉಡುಪಿ, ಜು.1: ಕೇಂದ್ರ ಸರಕಾರದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್‌ನ ಅಂಗಸಂಸ್ಥೆಯದ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ (ಯುಸಿಎಸ್‌ಎಲ್), ನಾರ್ವೆಯ ನೌಕಾ ಸಮೂಹ ಸಂಸ್ಥೆ ವಿಲ್ಸನ್ ಎಎಸ್‌ಎಗೆ 6300 ಟನ್ ಸಾಮರ್ಥ್ಯದ ಎಂಟು ಟಿಡಿಡಬ್ಲ್ಯು ಡ್ರೈ ಕಾರ್ಗೊ ಹಡಗು ಗಳನ್ನು ನಿರ್ಮಿಸಿಕೊಡುವ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಮೊದಲು ನಾರ್ವೆಯ ವಿಲ್ಸನ್ ಎಎಸ್‌ಎಗೆ ನಾಲ್ಕು 6300 ಟನ್ ಸಾಮರ್ಥ್ಯದ ಒಣ ಸರಕು (ಡ್ರೈ ಕಾರ್ಗೊ) ಹಡಗುಗಳ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಆದೇಶವನ್ನು ಪಡೆದಿತ್ತು. ಇದರೊಂದಿಗೆ ಇದೇ ಮಾದರಿಯ ಇನ್ನೂ ನಾಲ್ಕು ಹಡಗು ಗಳನ್ನು 2028ರ ಸೆ.19ರೊಳಗೆ ನಿರ್ಮಿಸಿ ಕೊಡುವಂತೆ ಔಪಚಾರಿಕ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಲಾಗಿದೆ ಎಂದು ಯುಸಿಎಸ್‌ಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದು ಉಡುಪಿಯ (ಮಲ್ಪೆ) ಶಿಪ್ ಯಾರ್ಡ್‌ನಲ್ಲಿ ಇದೀಗ ನಿರ್ಮಾಣ ಹಂತದಲ್ಲಿರುವ ಆರು 3800 ಟಿಡಿಡಬ್ಲ್ಯು ಡ್ರೈ ಕಾರ್ಗೋ ವೆಸೆಲ್‌ಗಳ ವಿನ್ಯಾಸ ಮತ್ತು ನಿರ್ಮಾಣಕ್ಕಾಗಿ 2023ರ ಜೂನ್‌ನಲ್ಲಿ ಮಾಡಿಕೊಳ್ಳಲಾದ ಒಪ್ಪಂದದ ಮುಂದುವರಿಕೆ ಆದೇಶ ವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ನೌಕೆಯು 100 ಮೀ.ಉದ್ದ ಮತ್ತು 6.5 ಮೀ. ವಿನ್ಯಾಸ ಮಾದರಿ ಯಲ್ಲಿದ್ದು, 6300 ಮೆಟ್ರಿಕ್ ಟನ್‌ಗಳ ಭಾರಿ ತೂಕವನ್ನು ಹೊಂದಿದೆ. ಹಡಗುಗಳನ್ನು ನೆದರ್‌ಲ್ಯಾಂಡ್‌ನ ಕೊನೊಶಿಪ್ ಇಂಟರ್‌ನೇಷನಲ್ ಸಂಸ್ಥೆ ವಿನ್ಯಾಸಗೊಳಿಸು ತ್ತಿದ್ದು, ಯುರೋಪ್ ಕರಾವಳಿಯ ಜಲಮಾರ್ಗದಲ್ಲಿ ಸಾಮಾನ್ಯ ಸರಕು ಸಾಗಣೆಗಾಗಿ ಪರಿಸರ ಸ್ನೇಹಿ ಡೀಸೆಲ್ ಎಲೆಕ್ಟ್ರಿಕ್ ಹಡಗಿನಂತೆ ನಿರ್ಮಿಸಲಾಗುತ್ತದೆ. ಒಟ್ಟು 8 ಹಡಗುಗಳ ಯೋಜನಾ ವೆಚ್ಚ ಸುಮಾರು 1,100 ಕೋಟಿ ರೂ. ಆಗಿದ್ದು, ಮೌಲ್ಯ ಹೊಂದಿದ್ದು, 2028ರ ಸೆ.ಒಳಗೆ ಕಾರ್ಯಗತ ಗೊಳಿಸಬೇಕಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ನಾರ್ವೆಯ ಬರ್ಗೆನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ವಿಲ್ಸನ್ ಎಎಸ್‌ಎ ಕಂಪೆನಿ ಯುರೋಪಿನ ಪ್ರಮುಖ ಕಿರು ಸಮುದ್ರ ನೌಕಾಪಡೆ ನಿರ್ವಾಹಕವಾಗಿದೆ. ಇದು ಯೂರೋಪಿನಾದ್ಯಂತ ಸುಮಾರು 15 ಮಿಲಿಯ ಟನ್ ಒಣ ಸರಕು ಗಳನ್ನು ಸಾಗಿಸುತ್ತದೆ. ಕಂಪನಿಯು 1500ರಿಂದ 8500 ಟನ್‌ವರೆಗಿನ ಸುಮಾರು 130 ಹಡಗುಗಳ ಹೊಂದಿದೆ.

ಉಡುಪಿಯ ಮಲ್ಪೆಯ ಬಂದರಿನೊಳಗಿರುವ ನೌಕಾ ನಿರ್ಮಾಣ ಕೇಂದ್ರ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆಯ ಅಧೀನಕ್ಕೆ ಬಂದ ಬಳಿಕ ಎರಡು 62 ಟನ್ ಬೊಲ್ಲಾರ್ಡ್ ಪುಲ್ ಟಗ್‌ಗಳನ್ನು ಅದಾನಿ ಹಾರ್ಬರ್ ಸರ್ವಿಸಸ್ ಕಂಪೆನಿಯ ಓಷನ್ ಸ್ಪಾರ್ಕಲ್‌ಗೆ ನಿರ್ಮಿಸಿಕೊಟ್ಟಿದೆ. ಇದೀಗ ಇನ್ನೊಂದು 70ಟನ್ ಬೊಲ್ಲಾರ್ಡ್ ಪುಲ್‌ಟಗ್ ಅನ್ನು ಪೋಲೆಸ್ಟಾರ್ ಮ್ಯಾರಿಟೈಮ್‌ಗೆ ಪೂರೈಸಿದೆ.

ಆತ್ಮನಿರ್ಭರ ಭಾರತದ ಉಪಕ್ರಮದಡಿಯಲ್ಲಿ ಭಾರತೀಯ ಬಂದರು ಗಳಿಗಾಗಿ ಭಾರತ ಸರಕಾರದಿಂದ ಅನುಮೋದಿತ ವಿನ್ಯಾಸ ಮತ್ತು ರೂಪುರೇಷೆ ಗಳಿಗೆ ಅನುಗುಣವಾಗಿ ಉನ್ನತ ಗುಣಮಟ್ಟದ ಸ್ಟಾಂಡರ್ಡ್ ಟಗ್‌ಗಳ ಮೊದಲ ಕಂತನ್ನು ಈಗಾಗಲೇ ಪೂರೈಸಲಾಗಿದೆ. ಅಲ್ಲದೇ ಯುಸಿಎಸ್‌ಎಲ್ ಕೇಂದ್ರ ಓಷನ್ ಸ್ಪಾರ್ಕಲ್ ಲಿಮಿಟೆಡ್ (ಮೂರು) ಮತ್ತು ಪೋಲೆಸ್ಟಾರ್ ಮ್ಯಾರಿಟೈಮ್ ಲಿಮಿಟೆಡ್ (ಒಂದು)ಗೆ ನಾಲ್ಕು 70ಟನ್ ಬೊಲ್ಲಾರ್ಡ್ ಪುಲ್‌ಟಗ್‌ಗಳನ್ನು ನಿರ್ಮಿಸಿಕೊಡುವ ಆದೇಶವನ್ನು ಪಡೆದಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News