ಕಸ್ತೂರಿ ರಂಗನ್ ವರದಿ ಜಾರಿಯಾಗಲು ಬಿಡಲ್ಲ: ಮುನಿಯಾಲು
ಉಡುಪಿ, ಸೆ.18: ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗಾಗಿ ಇರುವ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರಕಾರ ಐದು ಬಾರಿ ತಿರಸ್ಕರಿಸಿದ್ದರೂ, ಕೇಂದ್ರ ಸರಕಾರ ಇದೀಗ ಮರು ಪರಿಶೀಲನೆಗಾಗಿ ಆರನೇ ಬಾರಿಗೆ ರಾಜ್ಯಕ್ಕೆ ಕಳುಹಿಸಿದೆ ಎಂದು ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಆದರೆ ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಕಾರ್ಕಳ ತಾಲೂಕಿನ ಬಡಜನರು, ರೈತರು ಇದರಿಂದ ತೊಂದರೆಗೊಳಗಾಗುವ ಕಾರಣ ಕಸ್ತೂರಿ ರಂಗನ್ ವರದಿಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಅದನ್ನು ಈಗಿರುವ ರೂಪದಲ್ಲಿ ಜಾರಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಹುಲಿಯೋಜನೆ ಹಾಗೂ ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಬಿಜೆಪಿ ಮೊದಲಿನಿಂದಲೂ ಜನರನ್ನು ಭಯಪಡಿಸುತ್ತಾ ಬಂದಿದೆ. ಆದರೆ ಕಾಂಗ್ರೆಸ್ ಯಾವತ್ತೂ ಜನರೊಂದಿಗೆ ಇದ್ದು, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಈ ಬಗ್ಗೆ ಕಾರ್ಕಳ ಹಾಗೂ ಹೆಬ್ರಿ ಭಾಗದ ಜನರನ್ನು ಮಾಹಿತಿ ನೀಡಿ, ಅವರಲ್ಲಿ ವಿಶ್ವಾಸ ಮೂಡಿಸಲು ಕಾಂಗ್ರೆಸ್ ಪಕ್ಷ ಶೀಘ್ರವೇ ಕಾರ್ಕಳದ ಈದುವಿನಿಂದ ಹೆಬ್ರಿಯ ಸೋಮೇಶ್ವರದವರೆಗೆ ಪಾದಯಾತ್ರೆಯೊಂದನ್ನು ಆಯೋಜಿಸಲಿದೆ ಎಂದೂ ಮುನಿಯಾಲು ಉದಯ ಶೆಟ್ಟಿ ತಿಳಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೂ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಸಂಸತ್‌ನಲ್ಲಿ ಜಿಲ್ಲೆಯ ಜನತೆ ಪರವಾಗಿ ಮಾತನಾಡಬೇಕು ಎಂದ ಅವರು ವರದಿ ಮಂಡನೆಯಾದ ಸಂದರ್ಭಕ್ಕೂ ಇಂದಿಗೂ ಜನಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ. ಹೀಗಾಗಿ ವರದಿಯ ಪುನರ್ವಿಮರ್ಶೆ ನಡೆದು ಸೂಕ್ತ ಬದಲಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.