ಮಾನವ ಸರಪಳಿ ಕಾರ್ಯಕ್ರಮ ನಡೆಸದೆ ಕರ್ತವ್ಯ ಲೋಪ ಆರೋಪ: ಬೈಂದೂರು ಪ.ಪಂ. ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ದಸಂಸ ಆಗ್ರಹ
ಉಡುಪಿ, ಸೆ.18: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ಸೆ.15ರಂದು ರಾಜ್ಯ ಸರಕಾರದ ಆದೇಶದಂತೆ ’ಮಾನವ ಸರಪಳಿ’ ಕಾರ್ಯ ಕ್ರಮವನ್ನು ನಡೆಸದೇ ಕರ್ತವ್ಯ ಲೋಪ ಎಸಗಿರುವ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕಾರ್ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬೈಂದೂರು ತಾಲೂಕು ಸಮಿತಿ ನೇತೃತ್ವದ ನಿಯೋಗ ಇಂದು ಜಿಲ್ಲಾಧಿಕಾರಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿತು.
ಸರಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ಜಿಲ್ಲೆಯ ಬಹುತೇಕ ತಾಲೂಕು ಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಆದರೆ ಬೈಂದೂರು ತಾಲೂಕಿನ ತಹಶೀಲ್ದಾರರ ಕಛೇರಿ ಮುಂದೆ ಈ ಕಾರ್ಯಕ್ರಮವನ್ನು ಸರಕಾರಿ ಆದೇಶ/ಸುತ್ತೋಲೆಗೆ ಯಾವುದೇ ಮಹತ್ವ ನೀಡದೇ ಆಚರಣೆ ಮಾಡಿಲ್ಲ. ಈ ಕಾರ್ಯಕ್ರಮದ ಅನುಷ್ಟಾನಕ್ಕೆ ಕಾಟಾಚಾರಕ್ಕೆ ಎಂಬಂತೆ ಪೂರ್ವ ಭಾವಿ ಸಭೆ ಯೊಂದನ್ನು ಕರೆದಿದ್ದು, ಅಲ್ಲಿ ನಮ್ಮ ಸಂಘಟನೆಯ ಪದಾಧಿಕಾರಿಗಳಿಗೆ ಮಾಹಿತಿ ನೀಡಿಲ್ಲ.
ಬೈಂದೂರು ತಹಶೀಲ್ದಾರರು ತಾಲೂಕು ಕಛೇರಿಯ ಮುಂದೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಿಲ್ಲ. ಬೈಂದೂರು ಪಟ್ಟಣ ಪಂಚಾಯತ್ನ್ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕಾರ್ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿರುವುದಿಲ್ಲ. ಸಾರ್ವಜನಿಕರೊಂದಿಗೆ ಮಾನವ ಸರಪಳಿ ರಚಿಸಿರುವುದಿಲ್ಲ. ಸಂಘಟನೆಯ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆ ದಿನ ಬೆಳಿಗೆ ತಾಲೂಕು ಕಛೇರಿ ಮುಂಭಾಗ ಕಾದು ಕುಳಿತು ಕೊಂಡಿದ್ದರು. ಆದರೆ ಶಿಷ್ಟಾಚಾರದಂತೆ ಕಾರ್ಯ ಕ್ರಮ ನಡೆಯದೇ ಇರುವುದರಿಂದ ಬೇಸರಗೊಂಡು ಅಲ್ಲೇ ಪ್ರತಿಭಟನೆ ಕೂಡ ಮಾಡಿದ್ದಾರೆ ಎಂದು ಮನವಿ ತಿಳಿಸಲಾಗಿದೆ.
ಈ ಸಂದರ್ಭ ಅಜಯ್ ಭಂಡಾರ್‌ಕಾರ್ ಕಾರ್ಯಕ್ರಮವನ್ನು ಟೀಕಿಸಿದ್ದು, ಸರಕಾರಿ ಅಧಿಕಾರಿಯಾಗಿ ಸರಕಾರದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ, ಕರ್ತವ್ಯ ಲೋಪ ಎಸಗಿ, ಸರಕಾರದ ಕಾರ್ಯ ಕ್ರಮವನ್ನು ಟೀಕಿಸಿ, ರಾಜಕೀಯ ವ್ಯಕ್ತಿಯಂತೆ ವರ್ತಿಸಿದ್ದಾರೆ. ಆದುದರಿಂದ ಅಜಯ್ ಭಂಡಾರ್ಕಾರ್ ವಿರುದ್ಧ ತುರ್ತು ಶಿಸ್ತುಕ್ರಮ ಜರಗಿಸ ಬೇಕು. ಇಲ್ಲವಾದಲ್ಲಿ ಸಂಘಟನೆಯು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಮನವಿ ಯಲ್ಲಿ ಎಚ್ಚರಿಕೆ ನೀಡಲಾಗಿದೆ.
ನಿಯೋಗದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಮುಖಂಡರಾದ ಮಂಜುನಾಥ ಗಿಳಿಯಾರು, ಮಂಜುನಾಥ ನಾಗೂರು, ಶಿವರಾಜ ಬೈಂದೂರು, ಭಾಸ್ಕರ ಕೆರ್ಗಾಲು, ಶ್ಯಾಮಸುಂದರ್ ತೆಕ್ಕಟ್ಟೆ, ಗೋವಿಂದ ಹಳಗೇರಿ ಮೊದಲಾದವರು ಉಪಸ್ಥಿತರಿದ್ದರು.