ಅಭಯಾರಣ್ಯದಲ್ಲಿ ಮೀನಿನ ಕಾರ್ಖಾನೆಗೆ ವಿರೋಧ: ಪಾರಿಜೆಡ್ಡುವಿನ ಗ್ರಾಮಸ್ಥರಿಂದ ಅನಿರ್ದಿವಷ್ಟಾವಧಿ ಧರಣಿ

Update: 2024-09-18 15:13 GMT

ಕುಂದಾಪುರ, ಸೆ.18: ಮೂಕಾಂಬಿಕಾ ಅಭಯಾರಣ್ಯದ ಅತೀ ಸೂಕ್ಷ್ಮ ಪ್ರದೇಶವಾದ ಬೆಳ್ಳಾಲ ಗ್ರಾಮದ ಮೋರ್ಟು ಪಾರಿಜೆಡ್ಡುವಿನಲ್ಲಿ ಮೀನಿನ ಕಾರ್ಖಾನೆ ಆರಂಭಕ್ಕೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ಬುಧವಾರ ಗ್ರಾಮಸ್ಥರು ಕೆರಾಡಿ ಗ್ರಾಪಂ ಕಚೇರಿ ಎದುರು ಅನಿರ್ದಿವಷ್ಟಾವಧಿ ಧರಣಿ ನಡೆಸಿದರು.

ಮೀನಿನ ಕಾರ್ಖಾನೆಗೆ ಅನುಮತಿ ಪಡೆದು, ಅದೇ ಜಾಗದಲ್ಲಿ ಸೂಕ್ಷ್ಮ ಪ್ರದೇಶವಾದರೂ ರಸ್ತೆ ನಿರ್ಮಿಸಿದ್ದು, ಅಕ್ರಮ ಗಣಿಗಾರಿಕೆ, ಮರ ಸಾಗಾಟ ನಡೆಸುತ್ತಿದ್ದು, ಇದಲ್ಲದೆ ಕಲ್ಲುಬಾವಿ ಹತ್ತಿರ ಹಂದಿ ಫಾರಂನಿಂದ ಪರಿಸರ, ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು, ಇದರ ಜತೆಗೆ ಅಕ್ರಮ ಗಣಿಗಾರಿಕೆ ಯಿಂದಾಗಿ ಗುಡ್ಡ ಕುಸಿತದ ಭೀತಿಯೂ ಎದುರಾಗುತ್ತಿದೆ. ಮೋರ್ಟು, ಹೊಕ್ಕೋಳಿ, ತುಂಬಿಬೇರು ಹಾಗೂ ಕುಳ್ಳಂಬಳ್ಳಿ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಇದರಿಂದ ಆಪತ್ತು ಎದುರಾಗಲಿದೆ. ಇದಕ್ಕೆಲ್ಲ ಕಡಿವಾಣ ಹಾಕುವವರೆಗೆ ನಿರಂತರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಮಾತನಾಡಿ, ಗ್ರಾಪಂನಿಂದ ಅನ್ಯಾಯ ಆಗುವುದನ್ನು ಗ್ರಾಪಂ ಸರಿಪಡಿಸಬೇಕು. ಫಿಶ್ ಮಿಲ್‌ಗೆ ಅನುಮತಿ ಕೊಟ್ಟಿದ್ದು, ಇದರ ರದ್ದತಿ ಕುರಿತಂತೆ ಈಗ ಸದಸ್ಯರು, ಅಧ್ಯಕ್ಷರೆಲ್ಲ ಗ್ರಾಮಸ್ಥರ ಬೆಂಬಲಕ್ಕೆ ನಿಂತಿದ್ದಾರೆ. ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದ್ದು ಗ್ರಾಮಸ್ಥರ ಪರ ತೀರ್ಮಾನ ಕೈಗೊಳ್ಳಬಹುದು ಎಂಬ ಆಶಾಭಾವನೆಯಿದೆ. ಗ್ರಾಮಸ್ಥರ ಹೋರಾಟಕ್ಕೆ ಎಲ್ಲರ ಬೆಂಬಲವಿದೆ ಎಂದರು.

ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ ಶೆಟ್ಟಿ ಮಾತನಾಡಿ, ಮೀನಿನ ಕಾರ್ಖಾನೆಗೆ ಅನುಮತಿ ನೀಡಿರುವುದರ ರದ್ದತಿ ಕುರಿ ತಂತೆ ಗ್ರಾಮಸ್ಥರ ಬೇಡಿಕೆಯಂತೆ ಸೆ.20 ರಂದು ಗ್ರಾಪಂನಿಂದ ಎಲ್ಲ ಸದಸ್ಯರ ವಿಶೇಷ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗುವುದು. ಗ್ರಾಮಸ್ಥರ ಹಿತಾಸಕ್ತಿ ಕಾಯಲು ಪಂಚಾಯತ್ ಬದ್ಧವಾಗಿದೆ. ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ವಂಡ್ಸೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಸಂಗೀತಾ ಶೆಟ್ಟಿ ಮಾತನಾಡಿ, ನಮಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಮರ ಕಡಿದಿರುವ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ. ಆದಷ್ಟು ಬೇಗ ಚಾರ್ಜ್‌ಶೀಟ್ ಸಲ್ಲಿಸಲಾಗುವುದು. ರಸ್ತೆ ನಿರ್ಮಾಣದ ಜಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಗ್ರಾ.ಪಂ. ಸದಸ್ಯರು, ಪಿಡಿಒ, ಊರ ಪ್ರಮುಖರು, ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರ ತೇಜ್, ಕೊಲ್ಲೂರು ಎಸ್‌ಐ ಜಯಶ್ರೀ, ಪೊಲೀಸರು ಸ್ಥಳದಲ್ಲಿ ನಿಗಾ ವಹಿಸಿದ್ದರು.

‘ಮೋರ್ಟು ಪಾರಿಜೆಡ್ಡುವಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ, ಮರ ಸಾಗಾಟ, ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಪ್ರದೇಶಕ್ಕೆ ಹಾಗೂ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೂ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದೇನೆ. ಸ್ಥಳ ಪರಿಶೀಲನೆ ನಡೆಸಿದ್ದು, ಗಣಿಗಾರಿಕೆ ಈಗ ನಿಂತಿದೆ. ಮರ ಕಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯು ತ್ತಿದೆ. ಅದು ಜಾಗ ಸರಕಾರಿ ಅಥವಾ ಖಾಸಗಿ ಅನ್ನುವುದನ್ನು ಪರಿಶೀಲನೆ ನಡೆಸಬೇಕಾಗಿದೆ. ಮೀನಿನ ಕಾರ್ಖಾನೆ ಆರಂಭದ ಬಗ್ಗೆ ಪರಿಶೀಲಿಸಲಾಗುವುದು. ಅನುಮತಿ ರದ್ದತಿ ಕುರಿತು ಗ್ರಾಪಂನವರೇ ತೀರ್ಮಾನಿಸಬೇಕು. ಹಂದಿ ಫಾರಂ ಬಗ್ಗೆ ದಾಖಲೆ ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು.

-ಶೋಭಾಲಕ್ಷ್ಮೀ ಎಚ್.ಎಸ್., ತಹಶಿಲ್ದಾರ್, ಕುಂದಾಪುರ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News