ಸುಳ್ಳು ಪ್ರಚಾರದಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಯತ್ನ: ಕಲ್ಕುಳಿ

Update: 2024-09-24 12:07 GMT

ಉಡುಪಿ: ಕಸ್ತೂರಿ ರಂಗನ್ ವರದಿಯಲ್ಲಿ ಯಾರಿಗೂ ಪರಿಹಾರ ಕೊಡುವ ವ್ಯವಸ್ಥೆಯೇ ಇಲ್ಲ. ನಮ್ಮನ್ನು ಅದರೊಳಗೆ ಸಿಲುಕಿಸಿ ನಾವೇ ಈ ಜಾಗ ಬಿಟ್ಟು ಹೋಗುವಂತೆ ಮಾಡುವ ವರದಿ ಇದಾಗಿದೆ. ಈ ವರದಿಗೆ ವಿರೋಧ ಮಾಡುವವರ ಸಂಖ್ಯೆಗಿಂತ ಸುಳ್ಳು ಪ್ರಚಾರ ಮಾಡಿ ವರದಿ ಜಾರಿ ಮಾಡುವಂತೆ ಹೇಳುವವರ ಶಕ್ತಿ ದೊಡ್ಡದು ಇದೆ. ಈ ಎಲ್ಲ ವಿರೋಧ ಗಳ ನಡುವೆಯೂ ಈ ವರದಿಯನ್ನು ಜಾರಿ ಮಾಡುವ ಆತಂಕ ಹಾಗೂ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಹೇಳಿದ್ದಾರೆ.

ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕಿನ ಜಡ್ಕಲ್ ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕಸ್ತೂರಿರಂಗನ್ ವರದಿ ಸಂಬಂಧ ಈ ಹಿಂದೆ ಐದು ಬಾರಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಇದೀಗ ಮತ್ತೆ ಶಿರೂರು ಮತ್ತು ವಯನಾಡಿನ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಆರನೇ ಬಾರಿಗೆ ನೋಟಿಫಿಕೇಶನ್ ಹೊರಡಿಸಿದೆ. ಆದರೆ ಭೂಕುಸಿತಕ್ಕೂ ಈ ಕಸ್ತೂರಿವರದಿ ರಂಗನ್ ವರದಿಯಲ್ಲಿರುವ ಸಲಹೆಗೂ ಯಾವುದೇ ಸಂಬಂಧ ಇಲ್ಲ. ವಯನಾಡಿನಲ್ಲಿ ಭೂಕುಸಿತ ಆಗಿರುವ ಜಾಗ ಕಸ್ತೂರಿ ರಂಗನ್ ವರದಿಯ ಅನ್ವಯಿಸುವ ಜಾಗದಲ್ಲಿಯೇ ಇಲ್ಲ ಎಂದರು.

ಪಶ್ಚಿಮಘಟ್ಟ ಪರಿಸರ ದೃಷ್ಠಿಯಿಂದ ಬಹಳ ಅಮೂಲ್ಯವಾದ ಜಾಗ. ನಾವು ಸಾವಿರಾರು ವರ್ಷಗಳಿಂದ ಕಾಡು, ಪ್ರಾಣಿ ಪಕ್ಷಿಗಳ ಜೊತೆ ಬಾಳಿ ಬದುಕಿದ ವರು. ಪ್ರಾಣಿಪಕ್ಷಿಗಳು ಅಪಾಯದ ಅಂಚಿನಲ್ಲಿದೆ ಎಂದು ಹೇಳುವ ಇವರಿಗೆ ಮನುಷ್ಯರು ಕೂಡ ಅದರದ್ದೇ ಭಾಗ ಎಂಬುದು ಯಾಕೆ ಅರ್ಥ ಆಗುತ್ತಿಲ್ಲ. ಆದರೂ ಇವರು ಮನುಷ್ಯರನ್ನು ಹೊರಗೆ ಇಟ್ಟು ಕೇವಲ ಪ್ರಾಣಿಪಕ್ಷಿಗಳಿಗೆ ಸಂಬಂಧಪಟ್ಟಂತೆ ಈ ವರದಿಯನ್ನು ತಯಾರಿಸಿದ್ಧಾರೆ ಎಂದು ಅವರು ಆರೋಪಿಸಿದರು.

ಜಡ್ಕಲ್ ಗ್ರಾಪಂ ಅಧ್ಯಕ್ಷೆ ಪಾರ್ವತಿ ಗಿಡಕ್ಕೆ ನೀರು ಹಾಕುವ ಮೂಲಕ ಧರಣಿಗೆ ಚಾಲನೆ ನೀಡಿದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜನಪರ ಹೋರಾಟಗಾರ ಜಯನ್ ಮಲ್ಪೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಯಿತು.

ಜಡ್ಕಲ್ ಗ್ರಾಪಂ ಉಪಾಧ್ಯಕ್ಷೆ ಭಾರತಿ ಶೆಟ್ಟಿ, ಮಾಜಿ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಗ್ರಾಪಂ ಸದಸ್ಯರಾದ ಸುಂದರ್ ಭೋವಿ, ನಾರಾಯಣ ಶೆಟ್ಟ, ವಿದ್ಯಾವತಿ, ಲಕ್ಷ್ಮಣ ಶೆಟ್ಟಿ, ದೇವದಾಸ್ ವಿ.ಜೆ., ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಸಮಿತಿಯ ಪ್ರಮುಖರಾದ ರಂಜಿತ್ ಎಂ.ವಿ. ಮುದೂರು, ಜಿ.ಬಿ.ಮೋಹನ್ ಜಡ್ಕಲ್, ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

‘ನಾವು ಯಾರು ಕೂಡ ಕಾಡನ್ನು ನಾಶ ಮಾಡಿ ಬದುಕು ನಡೆಸಿಲ್ಲ. ಕಾಡಿನ ಜೊತೆ ಸಹಬಾಳ್ವೆ ನಡೆಸುವ ಸಂಸ್ಕೃತಿ ನಮ್ಮದು. ಆದರೆ ಇವರು ಕಾಡು ಮತ್ತು ನಮ್ಮನ್ನು ಬೇರೆ ಬೇರೆಯನ್ನಾಗಿ ಮಾಡಲಾಗಿದೆ. ಪೇಟೆಯಲ್ಲಿ ಕುಳಿತು ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿರುವವರು ಕಾಡು ಉಳಿಯಬೇಕೆಂದು ಹೇಳುತ್ತಿದ್ದಾರೆ. ಪಶ್ಚಿಮ ಘಟ್ಟ ಎಂಬುದು ಭೂಮಿಯ ಸ್ವರ್ಗ. ಅವರಿಗೆ ನಮ್ಮ ಜಾಗ ಬೇಕಾಗಿದೆ. ಇದರ ಲಾಭದ ಮೇಲೆ ವಿದೇಶಿ ಕೃಪ ಪೋಷಿತ ಪರಿಸರ ವಾದಿಗಳು ಸೇರಿದಂತೆ ಬಹಳ ಜನರು ಅವಲಂಬಿಸಿದ್ದಾರೆ’

-ಕಲ್ಕುಳಿ ವಿಠಲ್ ಹೆಗಡೆ, ಹೋರಾಟಗಾರರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News