ಉಡುಪಿ: ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ಕಾರ್ಯಾಗಾರ

Update: 2024-09-24 15:09 GMT

ಉಡುಪಿ: ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಯೋಜನೆಯಾದ ‘ಶಿಕ್ಷಣ ಮತ್ತು ಕಾನೂನು ಜಾಗೃತಿ’ಕಾರ್ಯಕ್ರಮದಡಿ ಉಡುಪಿ ಜಿಲ್ಲೆಯ 306 ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ಕಾರ್ಯಾಗಾರವನ್ನು ಸೆ.27ರಂದು ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ರೋಟರಿಯ ಶಿಕ್ಷಣ ಮತ್ತು ಜಾಗೃತಿ ಯೋಜನೆಯ ಸಭಾಪತಿ ಅಶೋಕ್‌ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಾಗಾರದ ಮೂಲಕ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ತಲುಪಲು ಪ್ರಯತ್ನಿಸಲಾಗುವುದು ಎಂದವರು ಹೇಳಿದರು.

ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಕರ ಸಂಘ ಇವರ ಸಹಯೋಗದೊಂದಿಗೆ ರೋಟರಿ ಅಂಬಲಪಾಡಿ ಈ ಕಾರ್ಯಕ್ರಮವನ್ನು ಆಯೋಜಿಸಲಿದೆ ಎಂದೂ ಅಶೋಕಕುಮಾರ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮವನ್ನು ಬೆಳಗ್ಗೆ 9:30ಕ್ಕೆ ರೋಟರಿ ಜಿಲ್ಲಾ ಗವರ್ನರ್ ಸಿ.ಎ. ದೇವಾನಂದ ಉದ್ಘಾಟಿಸಲಿದ್ದಾರೆ. ರೋಟರಿ ಅಂಬಲಪಾಡಿಯ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ರೋಟರಿ ಸಮುದಾಯ ಸೇವೆಯ ಜಿಲ್ಲಾ ನಿರ್ದೇಶಕಿ ಡಾ.ಎಚ್.ಜಯಗೌರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಗಣಪತಿ ಕೆ., ಉಡುಪಿ ಜಿಲ್ಲಾ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ರೋಟರಿ ಜಿಲ್ಲಾ ಯೋಜನೆಗಳ ಸಭಾಪತಿ ಕೆ.ಎಸ್.ಜೈವಿಠಲ್ ಮುಂತಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೂವರು ತಜ್ಞರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ. ವರ್ತಮಾನ ಕಾಲದ ಶಿಕ್ಷಣದ ಸವಾಲುಗಳ ಕುರಿತು ಕೋಟೇಶ್ವರ ವರದರಾಜ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ನಾಯಕ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡಕ್ಕೆ ಕಾರಣ ಪರಿಹಾರದ ಕುರಿತು ಖ್ಯಾತ ಮನೋವೈದ್ಯರಾದ ಡಾ. ಪಿ.ವಿ.ಭಂಡಾರಿ ಮಾತನಾಡಲಿದ್ದಾರೆ.

ಅಲ್ಲದೇ ಉಡುಪಿಯ ನ್ಯಾಯವಾದಿ ಎ.ಸಂಜೀವ ಅವರು ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಶಿಕ್ಷಕರಿಗಿರಬೇಕಾದ ಕಾನೂನು ಅರಿವು ಕುರಿತು ಹಾಗೂ ಡಿಡಿಪಿಐ ಗಣಪತಿ ಕೆ. ಅವರು ಎಸೆಸೆಲ್ಸಿ ಫಲಿತಾಂಶ ಹೆಚ್ಚಿಸಲು ಸರಳ ಸೂತ್ರಗಳ ಕುರಿತು ಮಾತನಾಡಲಿದ್ದಾರೆ ಎಂದು ಅಶೋಕಕುಮಾರ್ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಜೈವಿಠಲ್, ವಲಯ3ರ ಸಹಾಯಕ ಗವರ್ನರ್ ರಾಘವೇಂದ್ರ ಎಂ.ಸಾಮಗ, ವಲಯ 4ರ ಸಹಾಯಕ ಗವರ್ನರ್ ಜಗನ್ನಾಥ ಕೋಟೆ, ಉಪಸಭಾಪತಿ ಗಣೇಶಕುಮಾರ್ ಮಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News