ಕೃಷಿ ಪಂಪುಗಳ ಆಧಾರ್ ಜೋಡಣೆಗೆ ಒಪ್ಪಿಗೆ ಸೂಚಿಸಿಲ್ಲ: ಭಾಕಿಸಂ ಸ್ಪಷ್ಟನೆ

Update: 2024-09-28 14:36 GMT

ಉಡುಪಿ, ಸೆ.28: ಕಳೆದ ಒಂದು ವರ್ಷದಿಂದ ಕೃಷಿ ಪಂಪುಗಳಿಗೆ ಆಧಾರ್ ಜೋಡಣೆ ಬಗ್ಗೆ ಕೆಈಆರ್‌ಸಿ ಹಾಗೂ ಸರಕಾರದ ಒತ್ತಡದ ಮೇರೆಗೆ ಮೆಸ್ಕಾಂ ಪ್ರಯತ್ನಿಸುತ್ತಲೆ ಇದೆ. ಇದಕ್ಕೆ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಸ್ಪಷ್ಟವಾಗಿ ಹಾಗೂ ಕಾರಣ ಸಹಿತವಾಗಿ, ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ಈಗಲೂ ಕೂಡ ತಮ್ಮ ಸಂಘಟನೆಯ ನಿಲುನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾ.ಕಿ.ಸಂ. ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಬೇರೆ ರೈತ ಸಂಘಟನೆಗಳು ನಿನ್ನೆಯವರೆಗೆ ಆಧಾರ್ ಜೋಡಣೆ ಮಾಡಲೇ ಬೇಡಿ ಎಂದು ಪ್ರತಿಭಟಿಸುತ್ತಿದ್ದು, ಏಕಾಏಕಿ ತಮ್ಮ ನಿಲುವನ್ನು ಬದಲಿಸಿ, ಕೃಷಿ ಪಂಪುದಾರರು ಆಧಾರ್ ಜೋಡಣೆ ಮಾಡಬೇಕು ಎಂಬ ಹೇಳಿಕೆ ನೀಡಿರು ವುದು ರೈತರನ್ನು ಗೊಂದಲಕ್ಕೆ ತಳ್ಳಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.

ಅನೇಕ ವರ್ಷಗಳಿಂದ ಈ ಜಿಲ್ಲೆಯಲ್ಲಿ ಕೃಷಿ ಪಂಪು ಸೆಟ್‌ದಾರರ ಹಿತಾಸಕ್ತಿಯ ರಕ್ಷಣೆಗೆ ಭಾಕಿಸಂ ಕಟಿಬದ್ದವಾಗಿದ್ದು, ಮುಂದೆಯೂ ಆಧಾರ್ ಜೋಡಣೆ ಮಾಡದೇ ಇರುವ ರೈತರಿಗೆ ವಿದ್ಯುತ್ ಕಡಿತ ಅಥವಾ ಸಹಾಯಧನವನ್ನು ನಿಲ್ಲಿಸುವ ಯಾವುದೇ ಪ್ರಯತ್ನಕ್ಕೆ ಮೆಸ್ಕಾಂ ಆಥವಾ ಸರಕಾರ ಕೈ ಹಾಕಿದ್ದಲ್ಲಿ ರೈತರ ರಕ್ಷಣೆಗೆ ಸಂಘ ಕಾನೂನುಬದ್ಧ ಹಾಗೂ ಪ್ರತಿಭಟನಾ ಹೋರಾಟಗಳಿಗೆ ಸದಾ ಸಿದ್ದವಾಗಿದೆ ಎಂದು ಉಡುಪ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃಷಿ ಪಂಪುಗಳಿಗೆ ಆಧಾರ್ ಜೋಡಣೆಯನ್ನು ವಿರೋಧಿಸಲು ಭಾರತೀಯ ಕಿಸಾನ್ ಸಂಘ ಕೆಈಆರ್‌ಸಿ ಮತ್ತು ಮೆಸ್ಕಾಂಗೆ ಸ್ಪಷ್ಟವಾದ ಕಾರಣಗಳನ್ನು ನೀಡಿದೆ ಎಂದವರು ಹೇಳಿದ್ದಾರೆ.

*2010ರವರೆಗೆ ಜಿಲ್ಲೆಯ ಎಲ್ಲಾ ಕೃಷಿ ಪಂಪುಗಳಿಗೆ ಮೀಟರೀಕರಣ ಮಾಡಿ, ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತಿತ್ತು. ಆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯ ಪಂಪುಗಳಿಗೆ ಅಳವಡಿಸುವ ಮೀಟರ್‌ಗಳ ರೀಡಿಂಗ್ ಆಧಾರದಲ್ಲಿ ಒಂದು ಪಂಪಿನ ಬಳಕೆ 631 ಯುನಿಟ್ ಆಗಿತ್ತು. ಆಗ ಮೆಸ್ಕಾಂ ಟ್ರಾನ್ಸ್‌ಫಾರ್ಮರ್‌ಗೆ ಅಳವಡಿಸಿದ ಮೀಟರ್ ಆಧಾರದಲ್ಲಿ ಸರಕಾರದಿಂದ 1,349 ಯುನಿಟ್‌ಗೆ ಸಹಾಯಧನ ಪಡೆಯುತ್ತಿತ್ತು. ಇದನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ವಿದ್ಯು ಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಆಕ್ಷೇಪ ಸಲ್ಲಿಸಿದ ಕಾರಣ ಮೀಟರೀಕರಣ ಮಾಡುವುದನ್ನು ಮತ್ತು ರೀಡಿಂಗ್ ಮಾಡಿ ಬಿಲ್ ನೀಡುವುದನ್ನು ನಿಲ್ಲಿಸಿ, ಕೆಲವೊಂದು ಟ್ರಾನ್ಸ್‌ಫಾರ್ಮರ್‌ಗಳಗೆ ಮೀಟರೀಕರಣ ಮಾಡಿ, ರೀಡಿಂಗ್ ತೆಗೆದು ಹಾಕಿ ಅಂದಾಜು ಲೆಕ್ಕ ನೀಡುತ್ತಿದೆ. ನಮ್ಮ ಜಿಲ್ಲೆಯಲ್ಲಿ ಪ್ರತಿ ಕೃಷಿ ಪಂಪು ಸೆಟ್‌ನ ವಿದ್ಯುತ್ ಬಳಕೆ ವರ್ಷಕ್ಕೆ 1,500 ಯುನಿಟ್‌ಗಿಂತ ಕಡಿಮೆ ಇದ್ದರೂ ಅಂದಾಜು ಲೆಕ್ಕ ನೀಡಿ ಸುಮಾರು 4,000ಕ್ಕೂ ಹೆಚ್ಚು ಯುನಿಟ್‌ಗಳಿಗೆ ಸರಕಾರದಿಂದ ಸಹಾಯಧನ ಪಡೆಯುತ್ತಿದೆ. ಆ ಕಾರಣಕ್ಕೆ ಪಂಪುಗಳಿಗೆ ಮೀಟರೀಕರಣ ಮಾಡಿ ರೀಡಿಂಗ್ ತೆಗೆಯುವವರೆಗೆ ಆಧಾರ್ ಜೋಡಣೆ ಸಾಧ್ಯವಿಲ್ಲ.

*ವಿದ್ಯುಚ್ಛಕ್ತಿ ಕಾಯಿದೆ 2003ರ ಪ್ರಕಾರ 2005ಕ್ಕೆ ಮೊದಲು ಮೀಟರೀಕರಣ ಮಾಡದ ಗ್ರಾಹಕರಿಂದ ಮೆಸ್ಕಾಂ ಯಾವುದೇ ಬಿಲ್ ಹಣ ಪಡೆಯುವಂತಿಲ್ಲ. ಆದರೂ ಇಂದಿಗೂ ರೈತರು ಬೇಡಿಕೆ ಸಲ್ಲಿಸಿದ್ದರೂ ಮೀಟರೀಕರಣ ಮಾಡಲು ಮೆಸ್ಕಾಂ ತಯಾರಿಲ್ಲ.

*ಜಿಲ್ಲೆಯಲ್ಲಿ ಅನೇಕ ಪಂಪುದಾರರು ತೀರಿಕೊಂಡಿದ್ದು, ಅವರ ಕುಟುಂಬ ದವರು ಭೂಮಿಯೊಂದಿಗೆ ಪಂಪುಗಳನ್ನು ಬಳಸಿ ಕೊಂಡು ಬರುತ್ತಿದ್ದಾರೆ. ಆದರೆ ಹೆಸರು ಬದಲಾವಣೆ ಮಾಡಲು ರೈತರು ಹಿಂದಿನ ಬಾಕಿ, ಡೆಪಾಸಿಟ್ ಎಲ್ಲಾ ಸೇರಿ 10ರಿಂದ 20 ಸಾವಿರದವರೆಗೆ ಖರ್ಚು ಮಾಡಿಸಲಾಗುತ್ತಿದೆ. ಆದರೆ ಭೂಮಿಯ ದಾಖಲೆ ಬದಲಾದ ತಕ್ಷಣ ಕೇವಲ ಎಗ್ರಿಮೆಂಟ್ ಪತ್ರ ವೊಂದನ್ನು ಮಾತ್ರ ಬದಲಾವಣೆ ಮಾಡಿ, ಹೆಸರು ಬದಲಾವಣೆಗೆ ಅವಕಾಶ ಇದ್ದರೂ ಮೆಸ್ಕಾಂ ಒಪ್ಪುತ್ತಿಲ್ಲ.

*10 ಹೆಚ್‌ಪಿವರೆಗಿನ ಒಂದಕ್ಕಿಂತ ಹೆಚ್ಚು ಪಂಪುಗಳಿಗೂ ಕೂಡ ಈವರೆಗೆ ಸರಕಾರ ಉಚಿತ ವಿದ್ಯುತ್ ನೀಡುತ್ತಾ ಬಂದಿದೆ. ಈಗ ಆಧಾರ್ ಜೋಡಣೆ ಯಿಂದ ಅವೆಲ್ಲದರ ಲೆಕ್ಕ ಸಿಕ್ಕುವ ಕಾರಣ ಒಬ್ಬ ರೈತನಿಗೆ ಗರಿಷ್ಠ ಹತ್ತು ಹೆಚ್‌ಪಿ ವರೆಗೆ ಮಾತ್ರ ಸಬ್ಸಿಡಿ ಎಂಬ ಹೊಸ ತಗಾದೆಗಳನ್ನು ತೆಗೆಯುವ ಚಿಂತನೆ ಸರಕಾರ ಮಟ್ಟದಲ್ಲಿ ಕೇಳಿ ಬರುತ್ತಿದೆ. ಅಲ್ಲದೆ ಪಂಪುದಾರರ ಹೆಸರು ಬೇರೆ ಇರುವಾಗ ಮನೆಮಂದಿ ಯಾರದ್ದೋ ಒಬ್ಬರ ಆಧಾರ್ ಜೋಡಣೆ ಮಾಡಬಹುದೆಂಬ ಉತ್ತರಗಳು ಕೂಡ ಜನರನ್ನು ದಾರಿ ತಪ್ಪಿಸಿ, ರೈತರನ್ನು ಒಡೆಯುವ ನಿಟ್ಟಿನಲ್ಲಿ ಈ ಒಂದು ಹೇಳಿಕೆಗಳನ್ನು ಮೆಸ್ಕಾಂ ಅಧಿಕಾರಿಗಳು ನೀಡುತ್ತಿದ್ದಾರೆ.

ಮೆಸ್ಕಾಂ ತನ್ನ ಸೋರಿಕೆ, ಕಳ್ಳತನ, ಮೊದಲಾದವುಗಳನ್ನು ಕೃಷಿ ಪಂಪುದಾರರ ಮೇಲೆ ಹಾಕಿ ನಾವು ಬಳಸದ ವಿದ್ಯುತ್‌ಗೆ ಸಹಾಯಧನ ಪಡೆದಿರುವುದಾಗಿ ದಾಖಲಿಸುವ ಮೂಲಕ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ರೈತರಿಗೆ ನೀಡಲಾಗು ತ್ತಿರುವ ಉಚಿತ ವಿದ್ಯುತನ್ನು ನಿಲ್ಲಿಸಲು ಸರಕಾರದೊಂದಿಗೆ ಹುನ್ನಾರ ನಡೆಸಿದೆ. ಸರಿಯಾಗಿ ಲೈನ್‌ಗಳನ್ನು ನಿರ್ವಹಣೆ ಮಾಡದೇ, ಸರ್ವಿಸ್ ವಯರ್ ಬದಲಾಯಿಸಿ ಕೊಡದೇ, ಗುಣಮಟ್ಟದ ವಿದ್ಯುತನ್ನೂ ನೀಡದೇ ತನ್ನೆಲ್ಲಾ ನಷ್ಟವನ್ನು ರೈತರ ಮೇಲೆ ಹೊರಿಸಲು ಭಾರತೀಯ ಕಿಸಾನ್ ಸಂಘ ಯಾವತ್ತೂ ಒಪ್ಪುವುದಿಲ್ಲ ಎಂದು ಸತ್ಯನಾರಾಯಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News