ಅನುವಂಶಿಕ ರೋಗಕ್ಕೆ ಜೀನ್‌ನ ನ್ಯೂನತೆಯನ್ನು ಪತ್ತೆ ಹಚ್ಚಿದ ಕೆಎಂಸಿಯ ಡಾ.ಅಂಜು ಶುಕ್ಲ ನೇತೃತ್ವದ ಅಂ.ರಾ.ವಿಜ್ಞಾನಿಗಳ ತಂಡ

Update: 2024-09-28 16:13 GMT

ಉಡುಪಿ: ಜೀವಧಾತು (ಜೀನ್) ಇಪಿಬಿ೪ಐಎಲ್‌೩ರ ನ್ಯೂನತೆ ಅಥವಾ ದೋಷದಿಂದಾಗಿ ಹೊಸ ಅನುವಂಶಿಕ ರೋಗ ವೊಂದನ್ನು ಮಣಿಪಾಲ ಕೆಎಂಸಿಯ ಡಾ.ಅಂಜು ಶುಕ್ಲಾ ನೇತೃತ್ವದಲ್ಲಿ ಅಮೆರಿಕದ ವಿವಿಧ ವಿವಿಗಳ ವಿಜ್ಞಾನಗಳ ಜಂಟಿ ಸಂಶೋಧನೆಯಿಂದ ಪತ್ತೆ ಹಚ್ಚಲಾಗಿದೆ ಎಂದು ಮಾಹೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಮೆರಿಕನ್ ಮಿಚಿಗನ್ ವಿಶ್ವವಿದ್ಯಾನಿಲಯದ ಡಾ.ಸ್ಟಿಫಾನಿ ಬಿಲಾಸ್, ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಡಾ.ಕ್ವಾಸರ್ ಪಾದಿತ್ ಹಾಗೂ ಮಣಿಪಾಲ ಮಾಹೆಯ ಡಾ.ಅಂಜು ಶುಕ್ಲಾ ಅವರನ್ನೊಳಗೊಂಡ ವಿಜ್ಞಾನಿಗಳ ಸಂಶೋಧನೆ ಯಿಂದ ಈ ಹೊಸ ಅಂಶ ಬೆಳಕಿಗೆ ಬಂದಿದೆ ಎಂದು ಪ್ರತಿಷ್ಠಿತ ಮೆಡಿಕಲ್ ಜರ್ನಲ್ ‘ಬ್ರೈನ್’ನಲ್ಲಿ ಪ್ರಕಟವಾದ ಸಂಶೋ ಧನಾ ಲೇಖನದಲ್ಲಿ ವಿವರಿಸಲಾಗಿದೆ.

ಈ ಜೀವಧಾತುವಿನ ದೋಷದಿಂದಾಗಿ ಮನುಷ್ಯನ ಮಿದುಳಿನ ನರಗಳ ರಕ್ಷಣೆ ಹಾಗೂ ನಿರೋಧಕ ಶಕ್ತಿಗಳು ಕುಂದಿ, ಬೆಳವಣಿಗೆಯಲ್ಲಿ ವಿಳಂಬ, ರೋಗಗ್ರಸ್ತವಾಗುವುದು, ಸ್ನಾಯುಗಳ ಬಲಕುಂದುವಿಕೆ ಹಾಗೂ ಇತರ ದೋಷಗಳು ಕಾಣಿಸಿ ಕೊಳ್ಳುತ್ತವೆ ಎಂದು ಸಂಶೋಧನೆಯಿಂದ ಪತ್ತೆ ಹಚ್ಚಲಾಗಿದೆ.

ಸಂಶೋಧನೆಯಲ್ಲಿ ಸಹಭಾಗಿಗಳಾದ ಡಾ.ಪೂರ್ವಿ ಎಂ., ಡಾ.ಎಲಿಜಬೆತ್ ವಾರೆನ್ ಹಾಗೂ ಡಾ.ಗುಲೆರ್ಮೊ ರಾಡ್ರಿಗಝ್ ಬೇ ಅವರನ್ನೊಳಗೊಂಡ ತಂಡಕ್ಕೆ ವಿಶ್ವದ ವಿವಿಧ ದೇಶಗಳ ತಜ್ಞರು ಸಲಹೆಗಳ ಮೂಲಕ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಈ ಸಂಶೋಧನೆ ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದಂತೆ ಅನುವಂಶಿಕ ವಿಜ್ಞಾನದ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಮೊದಲ ಬಾರಿಗೆ ಇಪಿಬಿ೪ಐಎಲ್‌೩ ಅನುವಂಶಿಕ ಧಾತುವಿನಲ್ಲಾದ ಬದಲಾವಣೆಗೂ ಮಿದುಳಿನ ಕಾಯಿಲೆಗೂ ಇರುವ ಸಂಬಂಧವನ್ನು ನಮ್ಮ ಸಂಶೋಧನೆ ತೋರಿಸಿಕೊಟ್ಟಿದೆ. ಮಿದುಳು ಹಾಗೂ ಕಶೇರುಕ ನರದ ಸುತ್ತ ಸುತ್ತು ವರಿದಿರುವ ಕೊಬ್ಬಿನ ಸಂಶೋಧನೆಯಿಂದ ಮಿದುಳಿನ ಕಾಯಿಲೆ ಇರುವ ಕುಟುಂಬಕ್ಕೆ ಬೆಳಕಾಗುವ ಸಾಧ್ಯತೆ ಇದೆ ಎಂದು ಕೆಎಂಸಿಯ ಸಂಶೋಧನಾ ತಂಡದ ಮುಖ್ಯಸ್ಥೆ ಡಾ.ಅಂಜು ಶುಕ್ಲ ಅಭಿಪ್ರಾಯಪಟ್ಟಿದ್ದಾರೆ.

ದೈಹಿಕ ಬೆಳವಣಿಗೆ ಕುಂಠಿತ, ರೋಗನಿರೋಧಕ ಶಕ್ತಿಯ ಕೊರತೆ ಇರುವ ನಾಲ್ಕು ವರ್ಷದ ಬಾಲಕನೊಬ್ಬನನ್ನು ಚಿಕಿತ್ಸೆ ಗೊಳಪಡಿಸುವ ಸಂದರ್ಭ ಡಾ.ಅಂಜು ಶುಕ್ಲ ಮತ್ತವರ ತಂಡ ಕಂಡುಕೊಂಡ ಕೆಲವು ಹೊಸ ಅಂಶಗಳು ಈ ಸಂಶೋಧನೆಗೆ ಕಾರಣವಾಯಿತು. ಬಾಲಕನ ಡಿಎನ್‌ಎಯ ಪೂರ್ಣ ದತ್ತಾಂಶ (ಜೀನೋಮಿಕ್ ಡಾಟಾ)ದ ಅಧ್ಯಯನವು ಹೊಸ ಸಂಶೋಧನೆಗೆ ಪ್ರೇರಣೆಯಾಯಿತು.

ತಂಡ ನಡೆಸಿದ ಬಾಲಕನ ಜೀನೋಮ್ ವಿಶ್ಲೇಷಣೆಯಿಂದ ಜೀವಧಾತು ಇಪಿಬಿ೪ಐಎಲ್‌೩ರಲ್ಲಿ ನ್ಯೂನತೆಯ ಸಾಧ್ಯತೆ ಯನ್ನು ತೋರಿಸಿತ್ತು. ತಾವು ಕಂಡುಕೊಂಡ ಅಂಶಗಳನ್ನು ಡಾ.ಅಂಜು ಶುಕ್ಲಾ ಅವರು ಅಂತಾರಾಷ್ಟ್ರೀಯ ಸಂಶೋಧಕ ರೊಂದಿಗೆ ಸೇರಿ ಇದೇ ರೀತಿ ರೋಗ ಲಕ್ಷಣದ ಫ್ರಾನ್ಸ್, ಈಜಿಪ್ಟ್ ಹಾಗೂ ಪಾಕಿಸ್ತಾನ ದೇಶಗಳಲ್ಲಿರುವ ರೋಗಿಗಳನ್ನು ಗುರುತಿಸಿ ಹೆಚ್ಚಿನ ಸಂಶೋಧನೆ ನಡೆಸಿದಾಗ ಇವರು ಕಂಡುಕೊಂಡ ಅಂಶ ದೃಢಪಟ್ಟಿತು ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

ಮಾಹೆಯ ವೈದ್ಯಕೀಯ ತಂಡದ ನೇತೃತ್ವದಲ್ಲಿ ನಡೆದ ಸಂಶೋಧನೆಯ ಕುರಿತು ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್‌ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡಾ.ಶುಕ್ಲ ನೇತೃತ್ವದ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News