ಯುದ್ಧ ಭೀತಿಯ ಸನ್ನಿವೇಶದಲ್ಲಿ ಗಾಂಧಿ ತತ್ತ್ವಾದರ್ಶಗಳು ಬಹಳ ಮಹತ್ವ: ಪ್ರೊ.ಮುರಳೀಧರ ಉಪಾಧ್ಯ
ಉಡುಪಿ, ಅ.2: ಸಮಕಾಲೀನ ಜಗತ್ತಿನಲ್ಲಿ ಅಲ್ಲಲ್ಲಿ ಯುದ್ಧದ ಭೀತಿ ಇರುವ ಸನ್ನಿವೇಶದಲ್ಲಿ ಗಾಂಧೀಜಿ ತತ್ತ್ವಾದರ್ಶಗಳು ಬಹಳ ಮಹತ್ವವನ್ನು ಹೊಂದಿವೆ. ಈ ದಿನ ನಾವು ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಆದರ್ಶಗಳನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡ್ಕ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಗಾಂಧಿ ಜಯಂತಿ, ಶಾಸ್ತ್ರಿ ಜಯಂತಿ ಹಾಗೂ ಅಂತಾರಾಷ್ಟ್ರೀಯ ಅಹಿಂಸಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಗಾಂಧೀಜಿ ಅಸ್ಪೃಶ್ಯತೆಯ ನಿವಾರಣೆಗಾಗಿ ದಿಟ್ಟ ಹೆಜ್ಜೆಯನ್ನು ಇಟ್ಟರು. ಆ ಕಾಲದಲ್ಲಿ ಗಾಂಧೀಜಿಯವರು ನಾರಾಯಣ ಗುರುಗಳ ಜೊತೆಯಲ್ಲಿ ಸಂವಾದ ನಡೆಸಿ ಮಾರ್ಗದರ್ಶನ ಪಡೆದುಕೊಂಡರು ಹಾಗೂ ಗುರುಗಳ ಮಾತುಗಳ ಆಂತರ್ಯ ವನ್ನು ಚೆನ್ನಾಗಿ ಗ್ರಹಿಸಿಕೊಂಡರು ಎಂದು ಅವರು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಟಿ.ಮೋಹನದಾಸ ಪೈ ಕೌಶಲ್ಯಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ರಂಗ ಪೈ ಮಾತನಾಡಿ, ಗಾಂಧೀಜಿಯ ಸತ್ಯ, ಅಹಿಂಸೆ ಹಾಗೂ ಶಾಸ್ತ್ರೀಜಿಯವರ ಪ್ರಾಮಾಣಿಕತೆ ನಮ್ಮ ಮನಸ್ಸಿನಲ್ಲಿ ಸದಾ ಇರಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಹಾಗೂ ಕೆಲಸಗಳೇ ದೊಡ್ಡ ಪಾಠವಾಗಿ ನಮಗೆ ಪ್ರೇರಣೆ ನೀಡುತ್ತವೆ ಎಂದು ತಿಳಿಸಿದರು.
ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕ, ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಮಾತನಾಡಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗಾಂಧೀಜಿಗೆ ಪ್ರಿಯವಾದ ರಾಮ್ ಧುನ್ ಭಜನ್‌ಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.