ಮಹಿಷ ಪಂಥ ಕಾಲ್ಪನಿಕವಲ್ಲ; ವಾಸ್ತವ: ಪ್ರೊ.ಟಿ.ಮುರುಗೇಶಿ

Update: 2024-10-02 15:50 GMT

ಉಡುಪಿ: ಮಹಿಷ ಪಂಥ ಎಂಬುದು ಒಂದು ಕಾಲ್ಪನಿಕ ಪಂಥವಲ್ಲ, ಪಶ್ಚಿಮ ಕರಾವಳಿಯಲ್ಲಿ ಅದು ಇಂದಿಗೂ ಜೀವಂತ ಪಂಥವಾಗಿಯೇ ಇದೆ. ದೇಶದ ಏಕೈಕ ಮಹಿಷ ದೇವಾಲಯ ತುಳುರಾಜ್ಯದ ರಾಜಧಾನಿ ಎಂದು ಪ್ರಖ್ಯಾತವಾದ ಬಾರಕೂರಿನಲ್ಲಿದೆ ಎಂದು ನಿವೃತ್ತ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ.ಮುರುಗೇಶಿ ತಿಳಿಸಿದ್ದಾರೆ.

ಮೈಸೂರು ದಸರಾ ಸಂದರ್ಭದಲ್ಲಿ, ಭುಗಿಲೇಳುವ ವಿಷಮ ಸನ್ನಿವೇಶಕ್ಕೆ ಕಾರಣ ಮಹಿಷ ಪದವನ್ನು ತಪ್ಪಾಗಿ ತಿಳಿದು ಕೊಂಡಿರುವುದೇ ಕಾರಣವಾಗಿದೆ. ಮಹಿಷರು ಆಳಿದ ಊರು ಮೈಸೂರು. ಮಹಿಷರ ರಾಜ್ಯ ಮಹಿಷ ಮಂಡಲ. ಮಹಿಷ ಎಂದರೆ ಕೋಣ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿ.ಶ. 8-9ನೇ ಶತಮಾನದ ಆಳುಪರ ಶಾಸನಗಳಲ್ಲಿ ಮಯ್ಗೇಶ ಎಂಬ ಪದ ಬಳಕೆಯಾಗಿದೆ. ಮಹಿ ಎಂದರೆ ಭೂಮಿ. ಆದ್ದರಿಂದ ಮಹಿಗೆ+ಈಶ-ಮಹೀಷ/ಮಯ್ಗೇಶ. ಈಗಲೂ ಮಹಿಷಿ ಎಂದರೆ ರಾಣಿ ಎಂಬ ಅರ್ಥವೇ ಇದೆ. ಮಹಿಷಿ ರಾಣಿಯಾದರೆ, ಮಹಿಷ ರಾಜನಾಗಬೇಕಲ್ಲವೆ? ಎಂದು ಅವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.

ಬಾರಕೂರಿನ ಮಹಿಷ ದೇವಾಲಯದಲ್ಲಿನ ಮಹಿಷ ಶಿಲ್ಪ ಅತ್ಯಂತ ಕುತೂಹಲಕಾರಿಯಾಗಿದೆ. ನಂದಿಯ ತಲೆ ಹಾಗೂ ಮಾನವ ದೇಹದ ರಚನೆಯನ್ನು ಹೊಂದಿರುವ ಈ ಶಿಲ್ಪ, ಮಹಿಷ ಪಂಥದ ದೊರೆಗಳು ನಂದಿಯ ಮುಖವಾಡವನ್ನು ಧರಿಸಿ ಆಳ್ವಿಕೆ ನಡೆಸುತ್ತಿದ್ದರು ಮತ್ತು ನಂದಿಯ ಮುಖವಾಡವನ್ನು ಧರಿಸಿ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದರೆಂಬ ಕುತೂಹಲಕಾರಿ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಷ ದೈವವನ್ನು ಫಲವತ್ತತೆಯ ದೈವವಾಗಿ ಕರಾವಳಿಯಲ್ಲಿ ಆರಾಧಿಸಲಾಗುತ್ತದೆ.

ಈ ಮಹಿಷ ದೊರೆಗಳು, ವೈದಿಕ ವಿಸ್ತರಣೆಯನ್ನು ತೀವ್ರವಾಗಿ ಪ್ರತಿರೋಧಿಸಿದರ ಫಲವಾಗಿ, ವೈದಿಕರ ಕೆಂಗಣ್ಣಿಗೆ ಗುರಿ ಯಾಗಿ ಅಸುರ ದೊರೆಗಳೆಂದು ಕರೆಯಲ್ಪಟ್ಟರು. ಆದ್ದರಿಂದ, ಮಹಿಷ ಮಹಿಷಾಸುರನಾದ. ಪುರಾಣಗಳ ಪ್ರಕಾರ ದೇವಿಯು ಮಹಿಷಾಸುರನನ್ನು ಕೊಂದು ಮಹಿಷಮರ್ಧಿನಿ ಎಂದು, ಮೂಕಾಸುರನನ್ನು ಕೊಂದು ಮೂಕಾಂಬಿಕೆ ಎಂದು ಚಂಡ-ಮುಂಡರನ್ನು ಕೊಂದು ಚಾಮುಂಡಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಳು.

ಮಹಿಷರು ಯಾರು?: ಸಾಮ್ರಾಟ ಅಶೋಕನ ಪರಿಶ್ರಮದಿಂದ ಬೌದ್ಧ ಧರ್ಮ ದಕ್ಷಿಣ ಭಾರತದಲ್ಲಿ ನೆಲೆಯೂರಿತು. ಬೌದ್ಧ ಧರ್ಮದಲ್ಲಿ ಅನೇಕ ಶಾಖೆಗಳಿವೆ. ಅವುಗಳಲ್ಲಿ ಒಂದು ಮಹಿಶಾಸಿಕ/ಮಹಿಷಿಕ ಎಂಬ ಶಾಖೆ ಬನವಾಸಿ ಮಂಡಲದಲ್ಲಿ ಮತ್ತು ಮಹಿಷ ಮಂಡಲದಲ್ಲಿ ಜನಪ್ರಿಯವಾಗಿತ್ತು. ತಲಕಾಡಿನಲ್ಲಿ ಉತ್ಖನನ ಮಾಡಿದ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರು ವಜ್ರದ ಚಿನ್ಹೆ ಯನ್ನು ಹೊಂದಿರುವ ಒಂದು ಕಂಚಿನ ಅಚ್ಚನ್ನು ಹಾಗೂ ಧರ್ಮಚಕ್ರದ ಅವಶೇಷಗಳನ್ನು ಸಂಶೋಧಿಸಿದ್ದಾರೆ. ಅವರ ಪ್ರಕಾರ, ತಲಕಾಡು ಮಹಿಷ ಮಂಡಲದ ರಾಜಧಾನಿಯಾಗಿತ್ತು.

ಮಹಿಶಾಸಿಕ/ಮಹಿಷಿಕ ಬೌದ್ಧ ಶಾಖೆಯ ದೊರೆಗಳೆ ಮಹಿಷ ದೊರೆಗಳಾಗಿ ಆಳ್ವಿಕೆ ನಡೆಸಿದರು. ಸ್ಥಳೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ರಾಯಭಾರಿಗಳಾಗಿ, ವೈದಿಕ ಸಂಸ್ಕೃತಿಯ ವಿಸ್ತರಣೆಯನ್ನು ಪ್ರತಿರೋಧಿಸಿದ ಮಹಿಷನನ್ನು ಕರಾವಳಿಯಲ್ಲಿ ಪ್ರತಿನಿತ್ಯ ಆರಾಧಿಸಲಾಗುತ್ತದೆ ಎಂದು ಪ್ರೊ.ಮುರುಗೇಶಿ ವಿವರಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News