ಗ್ರಾಮಗಳಿಂದ ದೇಶದ ಸೌಹಾರ್ದತೆ ಉಳಿಯಲು ಸಾಧ್ಯ: ಮೋಹನ್ ಆಳ್ವ

Update: 2024-10-27 13:38 GMT

ಉಡುಪಿ, ಅ.27: ನಮ್ಮ ದೇಶ ಸೌಹಾರ್ದತೆಯಿಂದ ಬಾಳಿ ಬದುಕ ಬೇಕಾದರೇ ನಮ್ಮ ನಮ್ಮ ಪುಟ್ಟ ಊರಿನ ಸೌಹಾರ್ದತೆ ಉಳಿಯಬೇಕು. ನಮ್ಮೂರ ಎಲ್ಲಾ ಧರ್ಮದ ಜನರು ಒಂದಾಗಿ ಬದುಕಿದಾಗ ಮಾತ್ರ ದೇಶದ ಜನತೆಯಲ್ಲಿ ಏಕತೆ ಮೂಡ ಬಹುದು. ಅದಕ್ಕೆ ಇಂತಹ ಸಮಾನ ಮನಸ್ಕ ಮನಸ್ಸುಗಳು ಒಂದಾಗಬೇಕು ಎಂದು ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.

ಉದ್ಯಾವರ ಶ್ರೀಶಂಭುಶೈಲೇಶ್ವರ ದೇವಸ್ಥಾನದ ಮಾರ್ಕಾಂಡೆಯ ರಂಗ ಮಂಟಪದಲ್ಲಿ ಶನಿವಾರ ಜರಗಿದ ಉದ್ಯಾವರ ಫ್ರೆಂಡ್ಸ್ ಇದರ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ನಮ್ಮ ದೇಶವನ್ನು ಒಂದು ಭಾಷೆ ಒಂದು ಧರ್ಮ ಒಂದು ಸಂಸ್ಕೃತಿಗೆ ಸೀಮಿತವಾಗಿಡಲು ಸಾಧ್ಯವಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಂಡ ದೇಶ ನಮ್ಮದು. ಇದಕ್ಕೆ ನಮ್ಮ ಸಂವಿಧಾನ ಕಾರಣ. ಧರ್ಮ ಮತ್ತು ಸಮಾಜ ಎಂಬ ಎರಡು ಶಬ್ದಗ ಳನ್ನು ನಾವು ಸಾಕಷ್ಟು ಬಳಸುತ್ತಿದ್ದೇವೆ. ಆದರೆ ಅದನ್ನು ಅರ್ಥೈಸುವಲ್ಲಿ ವಿಫಲರಾಗುತ್ತಿದ್ದೇವೆ. ಧರ್ಮ ಬೇರೆ ಮತ ಬೇರೆ ಅವೆರಡೂ ಸೇರಿದಾಗ ಮಾನವ ಧರ್ಮ ಆಗುತ್ತದೆ. ನಾವು ನಮ್ಮ ಅದೃಷ್ಟದಿಂದ ಮಾನವ ಧರ್ಮದಲ್ಲಿ ಹುಟ್ಟಿದ್ದೇವೆ. ಸಮಾನ ಮಸ್ಕರು ಒಂದಾದರೆ ಮಾತ್ರ ಕಾಲ ಕಾಲದ ಸಮಸ್ಯೆಗಳನ್ನು ನಾವು ಎದುರಿಸಬಹುದು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮಾತ ನಾಡಿ, ಸೌಹಾರ್ದತೆಯ ನಾಡಲ್ಲಿ ಬೇರೆ ಮೌಲ್ಯ ಬಿತ್ತುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸೌಹಾರ್ದತೆಯ ಬದುಕು ಗಾಂಧಿ ಕಂಡ ಕನಸು. ನಮ್ಮ ಘನ ಸಂವಿಧಾನದ ಬಗ್ಗೆ ಇಂದು ನಾವು ಮಕ್ಕಳಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ. ಮುಂದೆ ದೇಶ ವನ್ನು ಸಂವಿಧಾನ ಮಾತ್ರ ಉಳಿಸಬಹುದು. ಜನತೆಗೆ ಸಂವಿಧಾನವನ್ನು ಪರಿಚಯಿಸಲು ಇದು ತುಂಬಾ ಅಗತ್ಯ ಕೆಲಸ ಎಂದು ತಿಳಿಸಿದರು.

ಸ್ಥಾಪಕ ಪದಾಧಿಕಾರಿಗಳಾದ ಅನ್ವರ್ ಹುಸೇನ್, ಯು.ಅರುಣ್ ಕುಮಾರ್, ಮಾಧವ ಜಿ.ಕೋಟ್ಯಾನ್, ರಫೀಕ್ ಯುಸೂಫ್ ಮತ್ತು ವಿವಿಧ ಕ್ಷೇತ್ರಗಳ ಸಾಧಕರಾದ ಅನ್ವಿತ್ ಆರ್.ಶೆಟ್ಟಿಗಾರ್, ಶೋಭಾ ದಿನೇಶ್ ಉದ್ಯಾವರ್, ಯು.ಯಜ್ಞೇಶ್ವರ ಆಚಾರ್ಯ, ಗಿರೀಶ್ ಕುಮಾರ್ ಸೋಮಪ್ಪಜತ್ತನ್ ಮತ್ತು ಮಹಾಪೋಷಕರಾದ ಅಬ್ದುಲ್ ಜಲೀಲ್ ಸಾಹೇಬ್ ಅವರನ್ನು ಸನ್ಮಾನಿಸ ಲಾಯಿತು.

ಉಡುಪಿ ತುಳುಕೂಟ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿದರು. ನಿರ್ದೇಶಕರಾದ ಶರತ್ ಕುಮಾರ್, ರಮೇಶ್ ಕುಮಾರ್ ಉದ್ಯಾವರ್, ಯು.ಚಂದ್ರಾವತಿ ಎಸ್. ಭಂಡಾರಿ, ಯು.ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.

ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ಆಲಿ 50 ವರ್ಷದ ಸಂಸ್ಥೆ ನಡೆದು ಬಂದ ದಾರಿಯನ್ನು ಸಭೆಯ ಮುಂದಿರಿಸಿದರು.

ಕಾರ್ಯದರ್ಶಿ ಆಶಾ ವಾಸು ಸಂಸ್ಥೆಯ ವರದಿ ಮಂಡಿಸಿದರು. ಉಪಾಧ್ಯಕ್ಷೆ ಸುಗಂಧಿ ಶೇಖರ್ ವಂದಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೈಂದೂರು ಸುರಭಿ ತಂಡದ ಮಕ್ಕಳಿಂದ ಮಕ್ಕಳ ರಾಮಾಯಣ ನಾಟಕ ಜರಗಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News