ತನಿಖೆ ತೀವ್ರಗೊಳಿಸಿ ಮೂರ್ತಿ ಮೇಲ್ಭಾಗ ಪತ್ತೆ ಹಚ್ಚಿ: ಮುನಿಯಾಲು ಆಗ್ರಹ

Update: 2024-10-27 14:43 GMT

ಉಡುಪಿ: ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಿರ್ಮಿಸಿದ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಮೂರ್ತಿಯ ಮೇಲ್ಭಾಗವನ್ನು ಪತ್ತೆ ಹಚ್ಚಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಬೇಕೆಂದು ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ಪರಶುರಾಮ ಮೂರ್ತಿ ನಿರ್ಮಿಸಿ ಉಡುಪಿ ಮತ್ತು ದ.ಕ. ಜಿಲ್ಲೆಯ ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ. ಈ ಹಿಂದೆ ಪಾರ್ಕ್‌ನಲ್ಲಿದ್ದ ಪರಶು ರಾಮನ ಮೂರ್ತಿಯ ಮೇಲಿನ ಭಾಗವನ್ನು ರಾತ್ರೋರಾತ್ರಿ ತೆಗೆದುಕೊಂಡು ಹೋಗಿದ್ದಾರೆ. ಆದುದರಿಂದ ಆರೋಪಿ ಕೃಷ್ಣ ನಾಯಕ್ ಮತ್ತು ಉಡುಪಿ ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳನ್ನು ವಿಚಾರಣೆಗೆ ಒಳಪಡಿಸಿದರೆ ಮೂರ್ತಿಯ ಮೇಲಿನ ಭಾಗ ಎಲ್ಲಿದೆ ಎಂಬುದು ಬಹಿರಂಗ ಪಡಿಸಲು ಸಾಧ್ಯ ಎಂದು ತಿಳಿಸಿದರು.

ಇವರು ಮೂರ್ತಿಯ ಸೊಂಟಕ್ಕಿಂತ ಮೇಲಿನ ಭಾಗವನ್ನು ಅನುಮತಿ ಮೇರೆಗೆ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ. ಹಾಗಾದರೇ ಆ ಭಾಗ ಎಲ್ಲಿದೆ ಹೇಳಬೇಕು. ಕೃಷ್ಣ ನಾಯಕ್ ತೆಗೆದುಕೊಂಡು ಹೋಗಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆ ಭಾಗ ಉಡುಪಿಯಲ್ಲಿಯೇ ಇರಬೇಕು ಎಂಬುದು ನಮ್ಮ ಸಂಶಯ. ಅದನ್ನು ಮಣ್ಮಿನಲ್ಲಿ ಹೂತು ಹಾಕಿ ದ್ದಾರೆಯೇ, ಸುಟ್ಟು ಹಾಕಿದ್ದಾರೆಯೇ ಅಥವಾ ಸಮುದ್ರಕ್ಕೆ ಎಸೆದಿದ್ದಾರೆಯೇ ಎಂಬುದು ಬಹಿರಂಗ ಆಗಬೇಕು. ಈ ಸಂಬಂಧ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಒಂದು ವಾರದೊಳಗೆ ಈ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕು ಎಂದು ಅವರು ಹೇಳಿದರು.

ಹೈಕೋರ್ಟ್ ಆರೋಪಿಯ ಅರ್ಜಿ ವಜಾ ಮಾಡಿದರೂ ಕೂಡ ಉಡುಪಿ ಜಿಲ್ಲೆಯ ಪೊಲೀಸರು ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ಯಾಕೆ ಮಿನ ಮೇಷ ಎಣಿಸುತ್ತಿದ್ದಾರೆ. ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡಿರುವ ಆರೋಪಿ ಕೃಷ್ಣ ನಾಯಕ್ ವಿರುದ್ಧ ಕ್ರಮ ಕೈಗೊಳ್ಳದಂತೆ ಉಡುಪಿಯ ಎಸ್ಪಿ ಯವರ ಕೈಯನ್ನು ಕಟ್ಟಿ ಹಾಕಿರುವುದು ಯಾರು ಎಂಬುದು ಬಹಿರಂಗವಾಗ ಬೇಕಾಗಿದೆ ಎಂದರು.

ಆರೋಪಿ ಶಿಲ್ಪಿ ಕೃಷ್ಣ ನಾಯಕ್‌ಗೆ ಉಡುಪಿ ನಿರ್ಮಿತಿ ಕೇಂದ್ರದ 2022ರ ಡಿ.15ರಂದು ಕಾರ್ಯಾದೇಶ ನೀಡುವ ಮೊದಲೇ 1.25ಕೋಟಿ ರೂ. ಹಣವನ್ನು 2022ರ ಸೆಪ್ಟಂಬರ್-ನವೆಂಬರ್ ತಿಂಗಳಲ್ಲಿ ಯಾರ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ ಎಂಬುದು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಕಾರ್ಯದರ್ಶಿ ವಿವೇಕಾನಂದ ಶೆಣೈ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಉಪಸ್ಥಿತರಿದ್ದರು

‘ಸುನೀಲ್ ಕುಮಾರ್‌ರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಿ’

ದೇವರ ಹೆಸರಿನಲ್ಲಿ ಜನರನ್ನು ವಂಚಿಸಿ ಶಾಸಕರಾಗಿರುವುದು ಇಡೀ ಜಗತ್ತಿನಲ್ಲಿ ಸುನೀಲ್ ಕುಮಾರ್ ಒಬ್ಬರೇ. ಇವರನ್ನು ಹಿಂದು ಧರ್ಮದಿಂದ ಬಹಿಷ್ಕರಿಸಬೇಕು. ಹಿಂದು ಧರ್ಮದ ಯಾವುದೇ ಕಾರ್ಯಕ್ರಮಗಳಿಗೂ ಇವರನ್ನು ಆಹ್ವಾನಿಸಬಾ ರದು. ಅಂತಹ ನೀಚ ಕೆಲಸವನ್ನು ಸುನೀಲ್ ಕುಮಾರ್ ಮಾಡಿದ್ದಾರೆ ಎಂದು ಉದಯ ಕುಮಾರ್ ಶೆಟ್ಟಿ ಮುನಿಯಾಲು ಟೀಕಿಸಿದರು.

ಪರಶುರಾಮನ ಮೂರ್ತಿ ವಿಚಾರದಲ್ಲಿ ತಪ್ಪು ಮಾಡಿದರೂ ಸಮರ್ಥನೆ ಮಾಡುತ್ತಿದ್ದವರು, ಇದೀಗ ಹೈಕೋರ್ಟ್ ಆದೇಶದ ನಂತರ ಚಕಾರ ಎತ್ತುತ್ತಿಲ್ಲ. ಯಾವುದೇ ರೀತಿಯ ತಪ್ಪು ಮಾಡಿದರೂ ಜನ ಕ್ಷಮಿಸುತ್ತಾರೆ. ಆದರೆ ದೇವರ ಹೆಸರಿನಲ್ಲಿ ನಡೆ ಸಿದ ಭ್ರಷ್ಟಾಚಾರಕ್ಕೆ ಯಾವುದೇ ಕ್ಷಮೆ ಇಲ್ಲ. ಚುನಾವಣೆ ಯಲ್ಲಿ ಗೆಲ್ಲುವ ಒಂದೇ ಉದ್ದೇಶಕ್ಕಾಗಿ ಪರಶುರಾಮನ ನಕಲಿ ಮೂರ್ತಿ ಸ್ಥಾಪಿಸುವ ಮೂಲಕ ಜನರ ನಂಬಿಕೆಯನ್ನು ಘಾಸಿಗೊಳಿಸಿದ್ದಾರೆ. ಆ ಮೂಲಕ ಶಾಸಕರು ಎಲ್ಲರಿಗೂ ಅವಮಾನ ಮಾಡಿದ್ದಾರೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News