ದಿಲೀಪ್ ಹೆಗ್ಡೆ ತೀವ್ರ ವಿಚಾರಣೆ: ವಿಷದ ಬಾಟಲಿ ಎಸೆದಿದ್ದ ಸ್ಥಳ ಮಹಜರು

Update: 2024-10-27 15:49 GMT

ಅಜೆಕಾರು: ಪ್ರಿಯಕರನ ಜೊತೆ ಸೇರಿ ಪತ್ನಿಯೇ ತನ್ನ ಪತಿಗೆ ವಿಷ ಉಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಇಂದು ಕೂಡ ಮುಂದುವರೆಸಿ, ಮಹಜರು ಪ್ರಕ್ರಿಯೆಯನ್ನು ನಡೆಸಿದ್ದಾರೆ.

ಪ್ರಕರಣದ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ದಿಲೀಪ್ ಹೆಗ್ಡೆಯನ್ನು ವಿವಿಧ ಕಡೆಗಳಿಗೆ ಕರೆದುಕೊಂಡು ಹೋಗಿ ಮಹಜರು ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ದಿಲೀಪ್ ಹೆಗ್ಡೆ ಕೃತ್ಯದ ಸಮಯ ಉಪಯೋಗಿಸಿದ್ದ ರಾಸಾಯನಿಕದ ಬಾಟಲಿಯನ್ನು ಎಸೆದ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಬಳಿಯ ಕುಕ್ಕುಂದೂರು - ಹಿರ್ಗಾನ ಸಂಪರ್ಕ ರಸ್ತೆಯಲ್ಲಿ ಮಹಜರು ನಡೆಲಾಗಿದೆ. ಅದೇ ರೀತಿ ದಿಲೀಪ್ ಹೆಗ್ಡೆಯು ಪ್ರತೀಮಾಗೆ ರಾಸಾಯನಿಕದ ಬಾಟಲಿಗಳನ್ನು ನೀಡಿದ ಮರ್ಣೆ ಗ್ರಾಮದ ಅಜೆಕಾರು ಪೇಟೆ ಬಳಿಯ ಆಕೆಯ ಬ್ಯೂಟಿ ಪಾರ್ಲರ್ ಬಳಿ ಕೂಡ ಮಹಜರು ನಡೆಲಾಗಿದೆ.

ಕೊಲೆಗೀಡಾದ ಬಾಲಕೃಷ್ಣ ಪೂಜಾರಿ ಅವರ ಮೂಳೆಗಳಲ್ಲಿ ರಾಸಾಯನಿಕ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಮೃತರ ತಂದೆ ಸಂಜೀವ ಸಾಲಿಯಾನ್ ಅವರಲ್ಲಿ ವಿಚಾರಿಸಿ, ಅವರ ಒಪ್ಪಿಗೆಯಂತೆ ಮೃತನ ಉತ್ತರಕ್ರಿಯೆ ಬಗ್ಗೆ ತೆಗೆದಿರಿಸಿದ್ದ 2 ಮೂಳೆ ತುಂಡುಗಳನ್ನು ಮಹಜರು ಮೂಲಕ ಸ್ವಾದೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ದಿಲೀಪ್ ಹೆಗ್ಡೆ ಪೊಲೀಸ್ ಕಸ್ಟಡಿ ಅವಧಿ ಅ.28ರಂದು ಮುಗಿಯಲಿರುವುದರಿಂದ ಸೋಮವಾರ ಆತನನ್ನು ಕಾರ್ಕಳ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News