ರಂಗಭೂಮಿಯಿಂದ ಮಕ್ಕಳಲ್ಲಿ ಸಹಿಷ್ಣುತೆ ಬೆಳೆಯಲು ಸಾಧ್ಯ: ಶಶಿಧರ್ ಭಾರಿಘಾಟ್
ಉಡುಪಿ, ನ.17: ಮಕ್ಕಳ ರಂಗಭೂಮಿಯು ಮಕ್ಕಳಿಗೆ ಸೃಜನಶೀಲ ಆಲೋಚನೆ, ಸ್ವಾವಲಂಬನೆ ಅಭ್ಯಾಸ, ಕ್ರಿಯಾ ಶೀಲತೆ ಹೆಚ್ಚಳ, ಒಳ್ಳೆಯದು ಕೆಟ್ಟದರ ಬಗ್ಗೆ ಅವಲೋಕನ ಮಾಡುವುದನ್ನು ಕಲಿಸುತ್ತದೆ.ಇದರಿಂದ ಮಕ್ಕಳಲ್ಲಿ ಸಹಿಷ್ಣುತೆ ಬೆಯಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ರಂಗ ತಜ್ಞ ಶಶಿಧರ್ ಭಾರಿಘಾಟ್ ಹೇಳಿದ್ದಾರೆ.
ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಉಡುಪಿ ವತಿಯಿಂದ ನೆಹರು ಜಯಂತಿಯ ಪ್ರಯುಕ್ತ ರವಿವಾರ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಮಕ್ಕಳ ನಾಟಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಂಗಭೂಮಿಯು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವುದಲ್ಲದೆ, ತಮಗೆ ಎದುರಾಗುವ ಸಮಸ್ಯೆಯನ್ನು ತಾವೇ ಬಗೆಹ ರಿಸಲು ಮತ್ತು ಪ್ರಶ್ನಿಸುವ ಮನೋಭಾವ ಹೇಳಿಕೊಡುತ್ತದೆ. ಆದರೆ ಇಂದು ನಾವು ನಮ್ಮ ದಿನನಿತ್ಯದ ಶಿಕ್ಷಣದಲ್ಲಿ ಇದನ್ನೆಲ್ಲ ಕಲಿಸಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.
ವಸಾಹತುಶಾಹಿ ವಿರೋಧಿಯಾಗಿದ್ದ ನೆಹರು, ಮಾನವೀಯತೆ ಬಗ್ಗೆ ಬಹಳಷ್ಟು ಪ್ರೀತಿ ಹೊಂದಿದ್ದರು. ಪ್ರಜಾಪ್ರಭುತ್ವ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವೈವಿಧ್ಯತೆಯನ್ನು ಗೌರವಿಸುವ ಪ್ರಧಾನಿಯಾಗಿದ್ದರು. ಸ್ವಚ್ಛ ಮನಸ್ಸಿನ ಲೇಖಕ, ಜನಪರ ಆಲೋಚನೆ ಮಾಡುವ ರಾಜಕಾರಣಿಯಾಗಿದ್ದರು. ಸಾಂಸ್ಥಿಕ ಧಾರ್ಮಿಕತೆಯನ್ನು ಪ್ರಬಲವಾಗಿ ವಿರೋಧಿ ಸಿದ್ದ ನೆಹರು, ದೇಶವನ್ನು ಧರ್ಮದಿಂದ ಮುನ್ನಡೆಸಲು ಸಾಧ್ಯವಿಲ್ಲ ಎಂದು ನಂಬಿದ್ದರು. ಅದಕ್ಕಾಗಿ ಶಿಕ್ಷಣ ಮತ್ತು ಕ್ರಿಯಾ ಶೀಲತೆ ಮುಖ್ಯ ಎಂಬ ಧ್ಯೇಯದೊಂದಿಗೆ ಕೆಲಸ ಕಾರ್ಯ ಮಾಡಿದ್ದರು. ಹಾಗಾಗಿ ನಾವು ನೆಹರೂ ಅವರನ್ನು ಮತ್ತೆ ಮತ್ತೆ ನೆನಪು ಮಾಡ ಬೇಕಾಗಿದೆ ಎಂದರು.
ಮಕ್ಕಳಿಗೆ ನೀಡುವ ಶಿಕ್ಷಣ ಇಡೀ ದೇಶದ ಭವಿಷ್ಯ ನಿರ್ಧಾರ ಮಾಡುತ್ತದೆ. ಮನುಷ್ಯ ಸಂಬಂಧ ಅರ್ಥಪೂರ್ಣವಾಗಿರಲು ಶಿಕ್ಷಣ ಅತ್ಯಂತ ಮುಖ್ಯ ಮತ್ತು ಮಾನಸಿಕ ಬೆಳವಣಿಗೆ ಶಿಕ್ಷಣ ಬೇಕು ಎಂಬುದು ಅವರ ಖಚಿತ ಅಭಿಪ್ರಾಯ ಆಗಿತ್ತು. ಹಾಗಾಗಿ ಅವರು ಸಾರ್ವಜನಿಕ ಶಿಕ್ಷಣವನ್ನು ಮುನ್ನಲೆಗೆ ತಂದರು. ಎಲ್ಲರಿಗೂ ಶಿರಕ್ಷಣ ಸಿಗುವಂತೆ ದೊಡ್ಡ ವಾತಾವರಣ ಕಲ್ಪಿಸಿದರು ಎಂದು ಅವರು ತಿಳಿಸಿದರು.
ರಥಬೀದಿ ಗೆಳೆಯರು ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಶಿ, ನಾಟಕ ವಿಭಾಗದ ಮುಖ್ಯಸ್ಥರಾದ ಸಂತೋಷ್ ನಾಯಕ್ ಪಟ್ಲ ಮತ್ತು ಸಂತೋಷ್ ಶೆಟ್ಟಿ ಹಿರಿಯಡ್ಕ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಬ್ರಹ್ಮಾವರ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ’ದೆವ್ವ ಮತ್ತು ಪುಟ್ಟ’ ಮತ್ತು ’ನಮಗೆಷ್ಟು ಭೂಮಿ ಬೇಕು’, ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್‌ಇ ವಿದ್ಯಾರ್ಥಿಗಳಿಂದ ಬಿ.ವಿ.ಕಾರಂತರ ’ಪಂಜರ ಶಾಲೆ’, ಕಿನ್ನರ ಮೇಳ ತುಮರಿ ಕಲಾವಿದರಿಂದ ‘ಇರುವೆ ಪುರಾಣ’ ನಾಟಕಗಳು ಪ್ರದರ್ಶನಗೊಂಡವು.